ನಮೂನೆ 12: ಸಲ್ಲಿಕೆ ಇಂದು ಅಂತಿಮ
ರಾಮನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಯ ಅಂಚೆ ಮತದಾನಕ್ಕಾಗಿ ನಮೂನೆ 12 ಅನ್ನು ಕಳುಹಿಸಲಾಗಿದೆ. ಅಂಚೆ ಮತದಾನಕ್ಕಾಗಿ ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗೆ ಸಲ್ಲಿಸಲು ಏ.29 ಕಡೆಯ ದಿನ. ಮೂಲ ಮತದಾರರ ಗುರುತಿನ ಚೀಟಿಯನ್ನು ತಪ್ಪದೆ ತರಬೇಕು. ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಡಿಸಿ ನವೀನ್ರಾಜ್ ಸಿಂಗ್ ತಿಳಿಸಿದ್ದಾರೆ.
ಇಂದು ಎರಡನೇ ಹಂತ ತರಬೇತಿ
ರಾಮನಗರ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗೆ ಏ.29ರಂದು 2ನೇ ಹಂತದ ತರಬೇತಿಯನ್ನು ಆಯಾ ತಾಲೂಕು ಕೇಂದ್ರಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಗಡಿಯ ಸರ್ಕಾರಿ ಜೂನಿಯರ್ ಕಾಲೇಜು, ರಾಮನಗರದ ಸರ್ಕಾರಿ ಜೂನಿಯರ್ ಕಾಲೇಜು, ಕನಕಪುರದ ರೂರಲ್ ಜೂನಿಯರ್ ಕಾಲೇಜು ಹಾಗೂ ಚನ್ನಪಟ್ಟಣದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.