ಮನೆಯ ಮೇಲೆ ಮರ ಬಿದ್ದು, ಕುಟುಂಬದ 3 ಮಂದಿಗೆ ಗಾಯ
ಮಾಗಡಿ: ಮನೆಯ ಮೇಲೆ ಮರ ಬಿದ್ದು, ಕುಟುಂಬದ ಮೂರು ಮಂದಿ ಸದಸ್ಯರು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ಸಂಜೆ ಪಟ್ಟಣದ ಹೊಸಪೇಟೆ ಕಾಲೋನಿಯಲ್ಲಿ ನಡೆದಿದೆ. ಬಂಗಾರಪ್ಪ, ಪತ್ನಿ ಪುಟ್ಟಮ್ಮ, ದೀಪಿಕಾ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೆ ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗುಡುಗು ಸಿಡಿಲು ಬಿರುಗಾಳಿಗೆ ಮನೆಯ ಪಕ್ಕದಲ್ಲಿದ್ದ ಬೇವಿನ ಮರ ಬಿದ್ದ ರಭಸಕ್ಕೆ ಮನೆಯ ಮೇಲಿನ ಹೆಂಚು, ತೊಲೆಗಳು ಉರುಳಿ ಮನೆ ಜಖಂಗೊಂಡಿದೆ.
ಪುರಸಭಾ ಮುಖ್ಯಾಧಿಕಾರಿ ಆರ್. ಮಂಜುನಾಥ್ ಅವರು ಗಾಯಳುಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇದೇ ವೇಳೆ ಗಾಯಾಳು ನೀಡಿದ ಮನವಿಯನ್ನು ಸ್ವೀಕರಿಸಿದ ಮಂಜುನಾಥ್ ಅವರು ಮನವಿಯನ್ನು ತಹಸೀಲ್ದಾರ್ ಅವರಿಗೆ ತಲುಪಿಸುವುದಾಗಿ ತಿಳಿಸಿದರು. ಬಿರುಗಾಳಿಗೆ ಮನೆ ಕಳೆದುಕೊಂಡ ಕುಟುಂಬಕ್ಕೆ ಪುರಸಭೆಯ ಶೇ. 22.75 ರ ಯೋಜನೆಯಡಿ ಮನೆ ದುರಸ್ತಿಗೆ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.