ಸೂಕ್ಷ್ಮ ವೀಕ್ಷಕರು ಜಾಗರೂಕ ಕರ್ತವ್ಯ ನಿರ್ವಹಿಸಿ: ಡಿಸಿ
ರಾಮನಗರ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ಸೂಕ್ಷ್ಮ ವೀಕ್ಷಕರಾಗಿ ನೇಮಕಗೊಂಡವರಿಗೆ ತರಬೇತಿ ಕಾರ್ಯಕ್ರಮವು ನಗರದ ಶ್ರೀರಾಮ ಚಿತ್ರಮಂದಿರದಲ್ಲಿ ಭಾನುವಾರ ನಡೆಯಿತು.
ಸೂಕ್ಷ್ಮ ವೀಕ್ಷಕರು ನೇರವಾಗಿ ಸಾಮಾನ್ಯ ವೀಕ್ಷಕರ ಅಧೀನಕ್ಕೆ ಒಳಪಡಲಿದ್ದು, ಚುನಾವಣಾ ಕಾರ್ಯವನ್ನು ಲಘುವಾಗಿ ಪರಿಗಣಿಸದೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್ ಕರೆ ನೀಡಿದರು. ಸೂಕ್ಷ್ಮ ವೀಕ್ಷಕರು ನೇಮಕಗೊಂಡಿರುವ ಮತಗಟ್ಟೆಯ ಚುನಾವಣಾ ದಿನದ ವರದಿಯನ್ನು ನೇರವಾಗಿ ಆಯಾ ಕ್ಷೇತ್ರದ ವೀಕ್ಷಕರಿಗೆ ಸಲ್ಲಿಸಬೇಕು. ವರದಿಯಲ್ಲಿ ಒಂದು ಸಣ್ಣ ಲೋಪವೆಸಗಿದರು ಆ ಮತಗಟ್ಟೆಗೆ ಮರು ಚುನಾವಣೆ ಮಾಡಬೇಕಾಗುತ್ತದೆ. ಇದರಿಂದಾಗಿ ಸೂಕ್ಷ್ಮ ವೀಕ್ಷಕರ ವರದಿಯು ಮಹತ್ವ ಹೊಂದಿದ್ದು, ವೀಕ್ಷಕರು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.