ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭ್ಯರ್ಥಿಗಳ ಆಸ್ತಿ ಹೆಚ್ಚಳ ಕುರಿತು ತನಿಖೆಗೆ ನಿರ್ದೇಶನ

Rashmi Kasaragodu
Updated On : 30 Apr 2013, 12:35 pm

ಕ.ಪ್ರ.ವಾರ್ತೆ   ಬೆಂಗಳೂರು   ಏ.29
ಕಳೆದ ಚುನಾವಣೆಯಿಂದ ಪ್ರಸಕ್ತ ಚುನಾವಣೆ ನಡುವಿನ ಅವಧಿಯಲ್ಲಿ ತಮ್ಮ ಆದಾಯ ಮೀರಿ ಆಸ್ತಿ ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಸದ್ಯದಲ್ಲೇ ಸತ್ಯ ಹೊರಬೀಳಲಿದೆ ಎಂದು ಕರ್ನಾಟಕ ಚುನಾವಣಾ ಕಾವಲು ಪಡೆ ಭರವಸೆ ವ್ಯಕ್ತಪಡಿಸಿದೆ.
ಜನಪ್ರತಿನಿಧಿಗಳು ಚನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ ಹಾಗೂ ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಭ್ಯರ್ಥಿಗಳ ಕುರಿತ ವರದಿ ಬಿಡುಗಡೆ ಮಾಡಿದ ಕಾವಲು ಪಡೆಯ ಸದಸ್ಯ ತ್ರಿಲೋಚನ ಶಾಸ್ತ್ರಿ ಅವರು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದರು.
2008ರ ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ್ದ  ಆಸ್ತಿ ವಿವರ ಹಾಗೂ ಪ್ರಸಕ್ತ ಚುನಾವಣೆಯಲ್ಲಿ ನೀಡಿರುವ ಆಸ್ತಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಇದನ್ನು ಜನಸಾಮಾನ್ಯರು ಗಮನಿಸಿ ವಿವೇಚನೆಯಿಂದ ಮತಚಲಾಯಿಸುವ ಅಗತ್ಯವಿದೆ ಎಂದರು.ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿಯ 3, ಕಾಂಗ್ರೆಸ್‌ನ 2, ಕೆಜೆಪಿಯ 3, ಬಿಎಸ್‌ಆರ್‌ಸಿಯ 2, ಲೋಕಸತ್ತಾ ಪಕ್ಷದ 2 ಸೇರಿದಂತೆ 13 ಅಭ್ಯರ್ಥಿಗಳು ಕೊಲೆ, ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದಾರೆ. ಕೆಜೆಪಿಯ ಇಬ್ಬರು ಅಭ್ಯರ್ಥಿಗಳ ವಿರುದ್ಧ ಅತ್ಯಾಚಾರ ಪ್ರಕರಣವಿದೆ. ಅಲ್ಲದೆ, 92 ಅಭ್ಯರ್ಥಿಗಳ ವಿರುದ್ಧ ಗುರುತರ ಆರೋಪಗಳಿವೆ. ಅನೇಕರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಈ ದಾಖಲೆಗಳನ್ನು ಖುದ್ದು ಅಭ್ಯರ್ಥಿಗಳೇ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಅಭಿಯಾನಕ್ಕೆ ಬೆಂಬಲ: ತಾವು ನಡೆಸುತ್ತಿರುವ 'ಮತಗಳು ಮಾರಾಟಕ್ಕಿಲ್ಲ' ಅಭಿಯಾನಕ್ಕೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ತಾವು ಈ ಸಂಬಂಧ ಎಸ್‌ಎಂಎಸ್ ಹಾಗೂ ಆಡಿಯೋ ಸಂದೇಶಗಳನ್ನು ಕೂಡ ರವಾನಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement