ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಮಾರಸ್ವಾಮಿಗೆ ಸೋಲಾದರೆ ಕಾವೇರಿ ನೀರಿನ ವ್ಯವಸ್ಥೆಗೆ ಸಂಚಕಾರ

Rashmi Kasaragodu
Updated On : 30 Apr 2013, 12:16 pm

ರಾಮನಗರ: ಪ್ರಸಕ್ತ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಸೋಲುಂಟಾದರೆ ಈ ಭಾಗದ ಕಾವೇರಿ ಕುಡಿಯುವ ನೀರಿನ ವ್ಯವಸ್ಥೆಗೆ ಸಂಚಕಾರ ಬಂದೊದಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಚ್ಚರಿಸಿದ್ದಾರೆ.
ನಗರದ ಹಳೆಯ ಬಸ್ ನಿಲ್ದಾಣ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಹೊರತಾದ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತಷ್ಟು ಹಿನ್ನಡೆಯಾಗುತ್ತದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೈಕಮಾಂಡ್ ಸಂಸ್ಕೃತಿ ಇದೆ. ಉಭಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ತಮಿಳುನಾಡು ಪರ ನಿಲ್ಲುತ್ತಾ ಬಂದಿವೆ. ಡಿಎಂಕೆ ಕಾರಣಕ್ಕೆ ಯುಪಿಎ ಸರ್ಕಾರ ತಮಿಳುನಾಡಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಸಿದೆ ಎಂದು ಟೀಕಿಸಿದರು.  ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ನರೇಂದ್ರ ಮೋದಿ ಮತ್ತು ತಮಿಳುನಾಡಿ ಸಿಎಂ ಜಯಲಲಿತಾ ನಡುವೆ ರಾಜಕೀಯವಾಗಿ ಒಪ್ಪಂದವೇರ್ಪಟ್ಟಿದೆ. ಹೀಗಾಗಿ ಆ ಪಕ್ಷದಿಂದಲೂ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.  ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕಾನೂನು ಬದ್ಧ ಹೋರಾಟ ನಡೆಸಿ, ಜಲ ವಿವಾದದಲ್ಲಿ ರಾಜ್ಯಕ್ಕೆ ಆಗಿರುವ  ಅನ್ಯಾಯವನ್ನು ಸರಿಪಡಿಸಲಿದೆ. ಅನಿವಾರ್ಯ ಆದಲ್ಲಿ ಕೇಂದ್ರದ ವಿರುದ್ಧ ಸಂಘರ್ಷಕ್ಕೂ ಸಿದ್ಧವಿದೆ ಎಂದು ದೇವೇಗೌಡ ತಿಳಿಸಿದರು.
ದೇಶದಲ್ಲೇ ಪ್ರತಿಷ್ಠಿತ ಕ್ಷೇತ್ರ: ರಾಮನಗರವು ದೇಶದಲ್ಲೇ ಪ್ರತಿಷ್ಠಿತ ಕ್ಷೇತ್ರವಾಗಿದೆ. ನಾನು ಈ ಕ್ಷೇತ್ರದ ಶಾಸಕ ಆಗಿಯೇ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಗೆ ಏರಿದ್ದೇನೆ. ಕುಮಾರಸ್ವಾಮಿ ಮತ್ತು ಕೆಂಗಲ್ ಹನುಮಂತಯ್ಯ ಕೂಡ ಈ ಕ್ಷೇತ್ರದಿಂದ ಆರಿಸಿ ಹೋಗಿ ಮುಖ್ಯಮಂತ್ರಿ ಆದವರು ಎಂದು ಬಣ್ಣಿಸಿದರು.
ಕುಮಾರಸ್ವಾಮಿ ಹುಟ್ಟೂರು ಹಾಸನದ ಹರದನಹಳ್ಳಿಯೇ. ಆದರೆ, ಅವರಿಗೆ ರಾಜಕೀಯವಾಗಿ ಜನ್ಮ ನೀಡಿರುವುದು ರಾಮನಗರ. ಅವರು ಕ್ಷೇತ್ರದಲ್ಲಿ ಹೆಚ್ಚಾಗಿ ಸಿಗೋದಿಲ್ಲ ಎನ್ನುವ ವಿರೋಧಿಗಳ ಟೀಕೆಗೆ ಸೊಪ್ಪು ಹಾಕುವುದರಲ್ಲಿ ಅರ್ಥವಿಲ್ಲ ಎಂದರು.
ಎದುರಾಳಿ ಅಭ್ಯರ್ಥಿ ಗೆದ್ದು ದಿನವೂ ನಿಮಗೆ ಸಿಗಬಹುದೇ ಹೊರತು ಬೇರೇನೂ ಪ್ರಯೋಜನವಿಲ್ಲ. ಅದೇ ಕುಮಾರಸ್ವಾಮಿ ಗೆದ್ದು, ಅಧಿಕಾರದ ಚುಕ್ಕಾಣಿ ಹಿಡಿದರೆ ರಾಮನಗರ ಕ್ಷೇತ್ರವಲ್ಲದೆ ಇಡೀ ಜಿಲ್ಲೆ ಮತ್ತು ರಾಜ್ಯದ ಚಿತ್ರಣವನ್ನೇ ಬದಲಿಸುತ್ತಾರೆ ಎಂದು ದೇವೇಗೌಡ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement