ತರಬೇತಿಗೆ ಗೈರು ಮೊಕದ್ದಮೆ ದಾಖಲು
ರಾಮನಗರ: ವಿಧಾನಸಭೆ ಚುನಾವಣೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳ ವಿರುದ್ಧ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳಿಗೆ ಚನ್ನಪಟ್ಟಣದಲ್ಲಿ ಏ.23ರಂದು ತರಬೇತಿ ನಡೆಯಿತು. ಗೈರಾದ ಸಿಬ್ಬಂದಿ ವಿರುದ್ಧ ಚುನಾವಣಾಧಿಕಾರಿ ದೂರಿನನ್ವಯ ಚನ್ನಪಟ್ಟಣ ಪುರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣದ ಸಹಾಯಕ ಶಿಕ್ಷಕಿ ಕಮರ್ ಬಾನು, ಏಡೆಲ್ ಶಾಲೆ ಶಿಕ್ಷಕ ಆರ್.ನರಸಿಂಹಮೂರ್ತಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಯೆಷಾ ತಾಸೀನ್, ರೇಷ್ಮೆ ತರಬೇತಿ ಸಂಸ್ಥೆ ಅಧೀಕ್ಷಕ ಎಸ್.ಕೆ.ರಾಮಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಸಿದ್ದಯ್ಯ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ದೈವಶಕ್ತಿ ಮುಂದೆ ಯಾವ ಶಕ್ತಿ...?
ಮಾಗಡಿ: ದೈವಶಕ್ತಿ ಮುಂದೆ ಯಾವ ಶಕ್ತಿಯೂ ನಿಲ್ಲದು, ಶ್ರೀಮಹದೇಶ್ವರಸ್ವಾಮಿ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ರಂಗಸ್ವಾಮಿ ತಿಳಿಸಿದರು. ಅವರು ಮೋಟೇಗೌಡನಪಾಳ್ಯ-ಕುರುಪಾಳ್ಯದ ಬಳಿ ಇರುವ ಶ್ರೀ ಮಾದೇಶ್ವರಸ್ವಾಮಿಯ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಮಾದಪ್ಪನ ಅಗ್ನಿ ಕೊಂಡ ಪ್ರವೇಶ ಸೋಮವಾರ ಸಂಜೆ ನೆರವೇರಿತು.
ಕಾರ್ಯಕರ್ತರ ಘರ್ಷಣೆ: ಗಾಯ
ಮಾಗಡಿ: ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವರುದ್ರಪ್ಪ ಮತ್ತು ಮಕ್ಕಳು ಸೇರಿ, ಕೆ.ಸಿ. ಬೃಂಗೇಶ್, ಆತನ ತಂದೆ, ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜೊತೆಗೆ ಧಮಿಕಿ ಹಾಕಿರುವ ಘಟನೆಯೂ ನಡೆದಿದೆ. ತಾಲೂಕಿನ ಗುಡೇಮಾರನಹಳ್ಳಿ ಅಂಗಡಿಯೊಂದರಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದ್ದು, ಬೃಂಗೇಶ್, ಆತನ ತಂದೆ, ಚಿಕ್ಕಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರು ಕುದೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.