ಪಕ್ಷಾಂತರಿಗಳದ್ದೇ ಇಲ್ಲಿ ಕಾರುಬಾರು
ಮತ್ತೀಕೆರೆ ಜಯರಾಮ್
ರಾಮನಗರ: ಪ್ರಸಕ್ತ ಚುನಾವಣೆಯಲ್ಲಿ ಈ ಹಿಂದೆ ವಿಧಾನಸಭೆ ಪ್ರವೇಶಕ್ಕೆ ವಿಫಲ ಯತ್ನ ನಡೆಸಿದವರು ಹಾಗೂ ಪಕ್ಷಾಂತರಿಗಳ ಕಲರವ ಕೇಳಿ ಬರುತ್ತಿದೆ. ಈ ನಾಯಕರೇ ಪ್ರಮುಖ ಅಭ್ಯರ್ಥಿಗಳು, ಪಕ್ಷಗಳ ಪ್ರಚಾರ ಕಾರ್ಯಕ್ರಮದಲ್ಲಿ ಮುಂಚೂಣಿಗೆ ಬಂದಿದ್ದಾರೆ.
ಜಿಲ್ಲೆಯ ಎಲ್ಲ 4 ಕ್ಷೇತ್ರಗಳಲ್ಲಿ ನಡೆದಿರುವ ಜಿದ್ದಾಜಿದ್ದಿನ ಹೋರಾಟದಲ್ಲಿ ಅನ್ಯ ಪಕ್ಷಗಳಿಂದ ಬಂದ ವಲಸೆ ಹಕ್ಕಿಗಳಿಗೆ ಪ್ರಾಧಾನ್ಯತೆ ಹೆಚ್ಚಾಗಿದೆ. ಪೂರ್ವಾಶ್ರಮದಲ್ಲಿ ಅನುಸರಿಸುತ್ತಿದ್ದ ಪಟ್ಟು, ವರಸೆಗಳನ್ನು ಬಿಚ್ಚಿಡುವ ಜತೆಗೆ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ಪಕ್ಷಾಂತರಿಗಳು ಮಹತ್ವ ಪಡೆದಿದ್ದಾರೆ.
ಸ್ವಪಕ್ಷೀಯ ಮುಖಂಡರು ಮತ್ತು ಕಾರ್ಯಕರ್ತರು ಹೇಗೂ ಕೈಬಿಡುವುದಿಲ್ಲವೆಂದು ನಂಬಿರುವ ನಾಯಕರು ವಲಸಿಗರನ್ನೇ ಅಪ್ಪಿಕೊಳ್ಳುತ್ತಿದ್ದಾರೆ. ರಾಮನಗರ, ಕನಕಪುರ, ಮಾಗಡಿ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಬಹುಪಾಲು ಹುರಿಯಾಳುಗಳ ಆಸುಪಾಸಿನಲ್ಲಿ ಪಕ್ಷಾಂತರಿಗಳೇ ಕಾಣಿಸುತ್ತಿದ್ದಾರೆ. ಈ ಪೈಕಿ ಕೆಲವರು ನಾಯಕರೆದುರು ಫೋಸು ನೀಡುವುದಕ್ಕೆ ಸೀಮಿತರಾಗಿದ್ದಾರೆ. ಕೆಲವರು ಪ್ರಾಮಾಣಿಕರಾಗಿ ದುಡಿಯುತ್ತಿದ್ದಾರೆ.
ತೆರೆಮರೆಗೆ ಸರಿದರು: ಈ ಹಿಂದೆ ಚುನಾವಣೆಗಳಲ್ಲಿ ಸೆಣೆಸಾಡಿದ ಕೆಲವರು ಈಗ ತೆರೆಮರೆಗೆ ಸರಿದಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾದ ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಇನ್ನೂ ಹೊರ ಬಂದಿಲ್ಲ. ಮರು ಚುನಾವಣೆಯಲ್ಲಿ ಸೆಣೆಸಿದ್ದ ಜೆಡಿಎಸ್ನ ಸಿಂ.ಲಿಂ. ನಾಗರಾಜು, ಕಾಂಗ್ರೆಸ್ನ ರಘುನಂದನ್ ರಾಮಣ್ಣ ಆಯಾ ಪಕ್ಷದಲ್ಲಿ ಪ್ರಚಾರದಲ್ಲಿದ್ದಾರೆ.
ಚನ್ನಪಟ್ಟಣದ ಟಿ.ಕೆ.ಯೋಗೇಶ್ ಈಗ ಮನೆ ಸೇರಿದ್ದು, ಮುಂದಿನ ನಡೆ ನಿಗೂಢವಾಗಿದೆ. 2008ರಲ್ಲಿ ಕನಕಪುರ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಎಂ.ವಿಶ್ವನಾಥ್ ಪಕ್ಷ ನಿಷ್ಠೆ ಮೆರೆದಿದ್ದಾರೆ. ರಾಮನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಮತಾ ನಿಚ್ಚಾನಿ ಈ ಕಡೆ ಸುಳಿದಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿದ್ದ ರುದ್ರೇಶ್ ಕೆಜೆಪಿಗೆ ಜಿಗಿದಿದ್ದಾರೆ.
ಮಾಗಡಿ ಕ್ಷೇತ್ರದಲ್ಲಿ ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದ ಕಲ್ಪನಾ ಶಿವಣ್ಣ ಈಗ ಮೂಲೆಗುಂಪಾಗಿದ್ದಾರೆ. ಯೋಗೇಶ್ವರ್ ಜತೆ ಬಿಜೆಪಿ ಸೇರಿದ್ದ ಆನಂದಸ್ವಾಮಿ ಮತ್ತು ಕೆಲ ಮುಖಂಡರು ಆ ಪಕ್ಷದಲ್ಲೇ ಉಳಿದಿದ್ದಾರೆ. ಕಳೆದ ಬಾರಿ ಚನ್ನಪಟ್ಟಣದ ಬಿಜೆಪಿ ಸ್ಪರ್ಧಾಳುವಾಗಿದ್ದ ರಮೇಶ್ ಈಗ ಸಾಮಾನ್ಯ ಕಾರ್ಯಕರ್ತ.
ಪ್ರಮುಖ ಪಕ್ಷಾಂತರಿಗಳು: ರಾಮನಗರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರ ವಿರುದ್ಧವೂ ಬಿಜೆಪಿಯಿಂದ ಸೆಣೆಸಿದ್ದ ಡಿ.ಗಿರೀಗೌಡ ಈಗ ಜೆಡಿಎಸ್ ಸಾರಥಿ. ರಾಮನಗರ ಮರು ಚುನಾವಣೆ ಮತ್ತು ಕಳೆದ ಬಾರಿಯ ಕನಕಪುರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರಾಯಣಗೌಡ ಈಗ ಜೆಡಿಎಸ್ ಸೇರಿದ್ದಾರೆ.
ಮಾಗಡಿ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಪಿ.ನಾಗರಾಜು, ಬಿಜೆಪಿ ಸರ್ಕಾರದಲ್ಲಿ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕೆ.ಶೇಷಾದ್ರಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಅನುಭವಿಸಿದ್ದ ನಾಗರಾಜ್ ಈಗ ಕೆಜೆಪಿ ಹುರಿಯಾಳು. ಹಾರೋಹಳ್ಳಿ ಭಾಗದ ಜಿ.ಪಂ. ಮಾಜಿ ಸದಸ್ಯ ನಾಗರಾಜು ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ತರಾವರಿ ಪಕ್ಷಾಂತರ: ಚುನಾವಣೆ ಘೋಷಣೆ ಹಂತದಿಂದಲೂ ಪಕ್ಷಾಂತರದ ಭರಾಟೆ ಈ ಜಿಲ್ಲೆಯಲ್ಲಿ ಜೋರಾಗಿದೆ. ಪಕ್ಷಾಂತರದ ಸುಳಿವು ನೀಡಿ ವ್ಯಾಪಾರ ಕುದುರಿಸಿಕೊಂಡವರೂ ಇದ್ದಾರೆ.
ಪಕ್ಷಾಂತರಿಗಳ ಪೈಕಿ ಕೆಲವರು ಸೇಡು ಮತ್ತು ಪ್ರತೀಕಾರಕ್ಕೆ ತೀರ್ಮಾನ ತೆಗೆದುಕೊಂಡ ನಿದರ್ಶನವೂ ಇದೆ. ಇನ್ನು ಕೆಲವರನ್ನು ಅಭ್ಯರ್ಥಿ ಇಲ್ಲವೇ ಮುಖಂಡರು ದುಂಬಾಲು ಬಿದ್ದು ಸೆಳೆದಿದ್ದಾರೆ.
ಕಣದಲ್ಲು ಪಕ್ಷಾಂತರಿಗಳು: ಚುನಾವಣೆಯಲ್ಲಿ ಹುರಿಯಾಳು ಆಗಿರುವವರಲ್ಲೂ ಪಕ್ಷಾಂತರಿಗಳು ಇದ್ದಾರೆ. ಮಾಗಡಿಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಜೇಡ್ರಳ್ಳಿ ಕೃಷ್ಣಪ್ಪ ಈಗ ಕೆಜೆಪಿ ಅಭ್ಯರ್ಥಿ.
ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕನಕಪುರದ ಮಾಜಿ ಸಚಿವ ಸಿಂಧ್ಯಾ ಕೂಡ ಪಕ್ಷಾಂತರಿಯೇ.