ಭ್ರಷ್ಟರ ಕೊನೆಗಾಣಿಸಲು ನನ್ನ ಪತಿ ಯತ್ನ: ಅನಿತಾ
ಚನ್ನಪಟ್ಟಣ: ರಾಜ್ಯದಲ್ಲಿನ ಭ್ರಷ್ಟ ಸರ್ಕಾರವನ್ನು ಕೊನೆಗಾಣಿಸಿ ಜನಹಿತ ಸರ್ಕಾರ ಸ್ಥಾಪಿಸಬೇಕೆಂಬ ಉದ್ದೇಶದಿಂದ ನನ್ನ ಪತಿ ಮತ್ತು ಮಾವ ನಿರಂತರವಾಗಿ ಹೋರಾಡುತ್ತಿದ್ದಾರೆ. ನನ್ನ ಪತಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಆದರೂ ಆರೋಗ್ಯ ಲೆಕ್ಕಿಸದೆ ಹೋರಾಡುತ್ತಿದ್ದಾರೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಕಣ್ಣೀರಿಟ್ಟರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನನ್ನ ಮಾವ ಈ ಇಳಿವಯಸ್ಸಿನಲ್ಲೂ ಹೋರಾಡುವಂತ ಪರಿಸ್ಥಿತಿಯನ್ನು ಭ್ರಷ್ಟ ರಾಜಕೀಯ ಪಕ್ಷಗಳು ನಿರ್ಮಿಸಿವೆ. ನನ್ನ ಪತಿಯ ಆರೋಗ್ಯ ಸರಿ ಇಲ್ಲ, ನನಗೆ ಭಯ ಆಗುತ್ತದೆ. ಆದರೂ ಅವರು ಹೋರಾಟ ಬಿಟ್ಟಿಲ್ಲ ಎಂದು ಭಾವುಕರಾದರು.ನಾನು ಈ ತಾಲೂಕಿನಲ್ಲಿ ಬೆಳೆದವಳು, ನಿಮ್ಮ ಬಳಿ ನನ್ನ ನೋವನ್ನು ತೋಡಿ ಕೊಳ್ಳುತ್ತಿದ್ದೇನೆ ಎಂದರು. ಕಾವೇರಿ ಉಳಿವಿಗೆ ಅಧಿಕಾರದಲ್ಲಿರುವ ಪಕ್ಷಗಳು ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಆದರೆ ನನ್ನ ಮಾವ ದೇವೇಗೌಡರು ಇಳಿವಯಸ್ಸಿನಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ರೈತರ ಮತಮಾತ್ರ ಕೇಳುವ ಇತರ ಪಕ್ಷಗಳು ರೈತರ ನೋವು ನಲಿವುಗಳ ಬಗ್ಗೆ ಯಾಕೆ ಪ್ರಶ್ನಿಸುವುದಿಲ್ಲ ಎಂದರು.