ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಗರ ಅಭಿವೃದ್ಧಿ: ಹ್ಯಾರಿಸ್
ಕ.ಪ್ರ.ವಾರ್ತೆ ಬೆಂಗಳೂರು ಏ.30
ಮತದಾರರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಲ್ಲಿ ಮಾತ್ರ ಸೂಕ್ತ ನೀಲನಕ್ಷೆ ತಯಾರಿಸಿ ಬೆಂಗಳೂರು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಶಾಸಕ ಎನ್.ಎ. ಹ್ಯಾರಿಸ್ ಅವರು ಹೇಳಿದ್ದಾರೆ.
'ಯೂತ್ ಕನೆಕ್ಟ್' ಎಂಬ ಸಂಘಟನೆ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಿಯಾಗಿ ಯೋಜನೆ ರೂಪಿಸದೆ ಬೆಂಗಳೂರು ನಗರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿಸಿದ್ದು ಬಹುತೇಕ ಸಮಸ್ಯೆಗಳಿಗೆ ಪ್ರಮುಖ ಕಾರಣ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ಬಹುಮತ ನೀಡಿ ಅಧಿಕಾರಕ್ಕೆ ತಂದಲ್ಲಿ ನೀಲನಕ್ಷೆ ರೂಪಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಜತೆಗೆ ಕಸ ವಿಲೇವಾರಿಗೆ ನಾಲ್ಕು ಡಂಪಿಂಗ್ ಯಾರ್ಡ್ ಗುರುತಿಸಿ, ಸಂಸ್ಕರಣೆಗೂ ಕ್ರಮಕೈಗೊಳ್ಳಲಾಗುವುದು. ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಕಸದ ಸಮಸ್ಯೆ ನಿವಾರಿಸಲಾಗುವುದು. ಅಲ್ಲದೆ, ತುರ್ತು ಪರಿಹಾರದ ಬದಲು ಶಾಶ್ವತ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ಪತ್ರಕರ್ತೆ ವಾಸಂತಿ ಹರಿಪ್ರಕಾಶ್, ಬೆಂಗಳೂರನ್ನು ಕಾಡುತ್ತಿರುವ ಕಸದ ಸಮಸ್ಯೆ ಬಗ್ಗೆ ಏನು ಕ್ರಮಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಹ್ಯಾರಿಸ್ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಏಕೆ ಸಿಎಂ ಅಭ್ಯರ್ಥಿ ಘೋಷಿಸಲು ಹಿಂದೇಟು ಹಾಕುತ್ತಿದೆ ಎಂದು ಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ಪ್ರಶ್ನಿಸಿದ್ದಕ್ಕೆ, ಕಾಂಗ್ರೆಸ್ ಇತಿಹಾಸದಲ್ಲಿ ಇದುವರೆಗೂ ಫಲಿತಾಂಶಕ್ಕೂ ಮುನ್ನ ಸಿಎಂ ಹೆಸರು ಘೋಷಿಸಿದ್ದಿಲ್ಲ. ಫಲಿತಾಂಶ ಬಳಿಕ ಪ್ರಮುಖರೆಲ್ಲ ಸೇರಿ ನಿರ್ಧರಿಸುವುದು ಕಾಂಗ್ರೆಸ್ ಸಂಪ್ರದಾಯ ಎಂದರು.
ಅಧ್ಯಕ್ಷತೆಯನ್ನು ಐಐಎಂನ ಪ್ರೊ. ರಾಜೀವ್ ಗೌಡ ವಹಿಸಿದ್ದು, ಕ್ರೀಡಾಪಟು ಹಕೀಮುದ್ದೀನ್ ಹಬೀಬುಲ್ಲಾ, ಕಾಂಗ್ರೆಸ್ ಮುಖಂಡ ರೆಹಮಾನ್ ಷರೀಫ್ ಅವರೂ ವೇದಿಕೆಯಲ್ಲಿದ್ದರು.