ಕಾಂಗ್ರೆಸ್ ಪರ ಕೆ.ಶೇಷಾದ್ರಿ ಪ್ರಚಾರ
ಕ.ಪ್ರ.ವಾರ್ತೆ ರಾಮನಗರ ಏ.30
ಶಾಸಕ, ಸಂಸದರಾಗಿ ರಾಮನಗರ ಕ್ಷೇತ್ರದತ್ತ ತಲೆ ಹಾಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಈ ಬಾರಿ ಚುನಾವಣೆಯಲ್ಲಿ ತಿರಸ್ಕರಿಸುವಂತೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮನವಿ ಮಾಡಿದರು.
ರಾಮನಗರ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಅಧಿಕಾರ ಶಾಹಿಯ ಅಟ್ಟಹಾಸವನ್ನು ಕೊನೆಗೊಳಿಸಬೇಕು. ಸ್ಥಳೀಯರಾಗಿರುವ ಮರಿದೇವರು ಅವರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ಶಾಸಕ ಕೆ.ರಾಜು ಇದ್ದರೂ ಇಲ್ಲದಂತಾಗಿದ್ದಾರೆ. ಸಂಸದರಾಗಿರುವ ಕುಮಾರಸ್ವಾಮಿ ರಾಮನಗರದಲ್ಲಿ ಶಾಸಕರ ಅಧಿಕಾರವನ್ನೂ ಸ್ವತಃ ಚಲಾಯಿಸುತ್ತಿದ್ದಾರೆ. ರಾಜಕೀಯ ಅರಾಜಕತೆಯಿಂದಾಗಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜೆಡಿಎಸ್ ಅಧಿಕಾರಾವಧಿಯಲ್ಲಿ ನಗರಸಭೆ ಆಡಳಿತ ದಿವಾಳಿ ಅಂಚಿಗೆ ತಲುಪಿತ್ತು. ಕುಡಿಯುವ ನೀರಿನ ಸಮಸ್ಯೆ ತೀವ್ರ ಉಲ್ಬಣಿಸಿದ್ದು, ನಗರದ ನಾಗರಿಕರಿಗೆ ಹತ್ತು ದಿನಕ್ಕೊಮ್ಮೆಯೂ ನೀರು ಸಿಗದಂತಾಗಿದೆ. ಒಳ ಚರಂಡಿ ಗಬ್ಬೆದ್ದು ನಾರುತ್ತಿದೆ. ಜೆಡಿಎಸ್ಗೆ ಮತ ನೀಡಿದರೆ ಮತ್ತೆ 5 ವರ್ಷ ರಾಮನಗರಕ್ಕೆ ಶಾಪವಾಗಲಿದೆ ಎಂದರು. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮರಿದೇವರು ನಮ್ಮೂರಿನ ಮಗ. ಮನೆ ಬಾಗಲಿಗೆ ಬಂದು ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕ್ರಿಯಾಶೀಲತೆ ಉಳ್ಳವರಾಗಿದ್ದಾರೆ. ಬಡವರ, ದೀನ-ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರನ್ನು ಗೆಲ್ಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸೈಯದ್ ಜಿಯಾ ಉಲ್ಲಾ ಮನವಿ ಮಾಡಿದರು.
ಕುಮಾರಸ್ವಾಮಿ ಅವರು ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದರಿಂದ ನಾಲ್ಕಾರು ಗುತ್ತಿಗೆದಾರರು, ಬೆರಳೆಣಿಕೆ ಶ್ರೀಮಂತರಿಗೆ ಅನುಕೂಲವಾಯಿತಷ್ಟೇ. ಬಡ ವರ್ಗದ ಜನರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ರೂಪಿಸಲಿಲ್ಲ. ಗುಡಿಸಲು ಮುಕ್ತ ತಾಲೂಕನ್ನಾಗಿಸುತ್ತೇನೆಂದು ಘೋಷಿಸಿದ ಕುಮಾರಸ್ವಾಮಿ ಅವರು ಒಂದೇ ಒಂದು ನಿವೇಶನವನ್ನೂ ನೀಡಲಿಲ್ಲ ಎಂದು ಟೀಕಿಸಿದರು.
ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ನರಸಿಂಹಯ್ಯ, ಪುಟ್ಟರಾಜು, ಕೆ.ವಿ. ಪ್ರಸನ್ನಕುಮಾರ್, ರಾಜು, ಸತೀಶ್, ಸೋಮಶೇಖರ್, ಸೈಯದ್ ಉಮರ್ ಇದ್ದರು.