ಬಿ.ಎಲ್. ಶಂಕರ್ ಗೆಲ್ಲಿಸಿ: ಸಾಹಿತಿಗಳ ಮನವಿ
ಕ.ಪ್ರ.ವಾರ್ತೆ ಬೆಂಗಳೂರು ಏ.30
ರಾಜ್ಯ ವಿಧಾನಸಭೆಯ ಘನತೆ- ಗೌರವ ಕಾಪಾಡುವುದಕ್ಕಾಗಿ ಬಿ.ಎಲ್.ಶಂಕರ್ ಅವರಂಥ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ನಾಡಿನ ಖ್ಯಾತ ಸಾಹಿತಿಗಳು ದಾಸರಹಳ್ಳಿ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದ ಆತ್ಮಸಾಕ್ಷಿಯ ಪರವಾಗಿ ಬಿ.ಎಲ್. ಶಂಕರ್ ಪರ ಪ್ರಚಾರ ಮಾಡುವುದಕ್ಕೆ ಮುಂದೆ ಬಂದಿರುವ ಖ್ಯಾತ ಸಾಹಿತಿಗಳಾದ ಡಾ.ಯು.ಆರ್. ಅನಂತಮೂರ್ತಿ, ಡಾ.ಗಿರೀಶ್ ಕಾರ್ನಾಡ್, ಡಾ.ಚಂದ್ರಶೇಖರ್ ಕಂಬಾರ್, ಡಾ.ಕೋ. ಚನ್ನಬಸಪ್ಪ, ಎಂ.ವಿ. ರಾಜಶೇಖರನ್, ಡಾ.ಗೊ.ರು. ಚೆನ್ನಬಸಪ್ಪ, ಡಾ.ಸಿ.ಪಿ. ಕೃಷ್ಣಕುಮಾರ್, ಡಾ.ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಡಾ.ವಿಜಯಾ, ಡಾ.ಕೆ. ಮರುಳಸಿದ್ದಪ್ಪ, ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ, ಪ್ರೊ.ಜಿ.ಕೆ. ಗೋವಿಂದರಾವ್, ಟಿ.ಎನ್. ಸೀತಾರಾಂ, ಡಾ.ಹಿ.ಶಿ. ರಾಮಚಂದ್ರ, ಟಿ.ಎನ್. ಸೀತಾರಾಂ, ಡಾ. ಕಾಳೇಗೌಡ ನಾಗವಾರ್, ಡಾ. ರಂಜಾನ್ ದರ್ಗಾ ಸೇರಿದಂತೆ 25ಕ್ಕೂ ಹೆಚ್ಚು ಸಾಹಿತಿಗಳು ಶಂಕರ್ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಭಾರತ ಸಂವಿಧಾನದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಪ್ರೌಢ ಪ್ರಬಂಧ ಮಂಡಿಸಿರುವ ಶಂಕರ್, ಸಂವಿಧಾನದ ಆಶಯದ ಜಾರಿಗಾಗಿ ಸದಾ ಶ್ರಮಿಸಿದವರು. ತರ್ಕಬದ್ಧ ಮಾತುಗಾರಿಕೆಯ ಜತೆಗೆ ಪಾರದರ್ಶಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸಾಹಿತ್ಯ ಸಂಗೀತ, ನಾಟಕ, ಚಿತ್ರಕಲೆಯ ಅಭಿರುಚಿ ಜತೆಗೆ ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠರ ಜತೆ ಒಡನಾಟ ಹೊಂದಿದ್ದಾರೆ. ರಾಜ್ಯದ ಯುವಜನ ಸೇವೆ- ಕ್ರೀಡಾ ಸಚಿವರಾಗಿ, ಕೈಗಾರಿಕಾ ಮಂತ್ರಿಯಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ, ವಿಧಾನ ಪರಿಷತ್ ಸಭಾಪತಿಯಾಗಿ, ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದಾರೆ. ಇಂಥವರು ರಾಜ್ಯ ವಿಧಾನಸಭೆಯನ್ನು ಪ್ರತಿನಿಧಿಸುವುದು ಇಂದಿನ ಅನಿವಾರ್ಯತೆಯಾಗಿದ್ದು, ದಾಸರಹಳ್ಳಿ ಕ್ಷೇತ್ರದ ಜನತೆ ಅವರ ಗೆಲುವಿಗೆ ಸಹಕರಿಸುವಂತೆ ಸಾಹಿತಿಗಳು ಮನವಿ ಮಾಡಿದ್ದಾರೆ.
ಪಾದಯಾತ್ರೆಯಲ್ಲಿ ದಾಖಲೆ
ಮಾಜಿ ಪ್ರಧಾನಿ ಚಂದ್ರಶೇಖರ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 6 ತಿಂಗಳು ಕಾಲ ನಡೆಸಿದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿ.ಎಲ್. ಶಂಕರ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ವೈಶಿಷ್ಟ್ಯ ಮೆರೆದಿದ್ದಾರೆ. ಕಳೆದ 10 ದಿನಗಳಿಂದ ನಿತ್ಯ 10 ಗಂಟೆ ಪಾದಯಾತ್ರೆ ನಡೆಸಿ ಪ್ರತಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ತೆರೆದು ಜೀಪಿನಲ್ಲಿ ಪ್ರಚಾರ ನಡೆಸುವ ರಾಜಕಾರಣಿಗಳಿಗಿಂತ ಕ್ಷೇತ್ರದಲ್ಲಿ ಭಿನ್ನವಾಗಿ ಕಾಣುತ್ತಿದ್ದಾರೆ.