ಬಿಜೆಪಿ ಮತ್ತೆ ಅಧಿಕಾರಕ್ಕೆ: ಜಗದೀಶ ಶೆಟ್ಟರ್ ವಿಶ್ವಾಸ
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಚಂದ್ರಣ್ಣ ಅವರ ಪರವಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಗಳವಾರ ರೋಡ್ ಶೋ ನಡೆಸಿದರು.
ಹಳೇ ಬಸ್ ನಿಲ್ದಾಣದಲ್ಲಿ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ರಾಜ್ಯದಲ್ಲಿ ಬಿಜೆಪಿ ಬಹುಮತಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಾಮಾಣಿಕ ಹಾಗೂ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದ ವ್ಯಕ್ತಿ ಜಿ.ಚಂದ್ರಣ್ಣ ಅವರಿಗೆ ಮತ ನೀಡುವುದರ ಮೂಲಕ ತಮ್ಮ ಪಕ್ಷದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಬಯಲು ಸೀಮೆ ಜಿಲ್ಲೆಗಳ ರೈತರ ಮತ್ತು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಡಾ.ಪರಮಶಿವಯ್ಯರವರ ವರದಿಯಂತೆ ಎತ್ತಿನಹೊಳೆ ಶಾಶ್ವತ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಈಗಾಗಲೇ 800 ಸಾವಿರ ಕೋಟಿ ರು. ಬಿಡುಗಡೆ ಮಾಡಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಕಾಮಗಾರಿ ಆರಂಭವಾಗಿಲ್ಲ. ರಾಜ್ಯದಲ್ಲಿ ಪ್ರತಿ ತಾಲೂಕಿಗೆ ಕೆರೆಗಳ ಪುನಶ್ಚೇತನಕ್ಕಾಗಿ ತಲಾ ಐದು ಕೋಟಿ ರು.ಬಿಡುಗಡೆ ಮಾಡಿದ್ದೇವೆ. ಅಲ್ಲದೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರು. ವಿಶೇಷ ಅನುದಾನ ನೀಡಲಾಗಿದೆ ಎಂದರು.
ಕೋಟಿ ರು. ಬಿಡುಗಡೆ: ರಾಜ್ಯದಲ್ಲಿ 3000 ಗ್ರಾಮಗಳಿಗೆ ಸುವರ್ಣ ಗ್ರಾಮ ಯೋಜನೆಯಲ್ಲಿ ಪ್ರತಿ ಗ್ರಾಮಕ್ಕೆ ಒಂದು ಕೋಟಿ ರು.ಬಿಡುಗಡೆ ಮಾಡಿದೆ. ಬಿಜೆಪಿ ಸರ್ಕಾರದ ಐದು ವರ್ಷದ ಅವಧಿಯಲ್ಲಿ 23 ನೀರಾವರಿ ಯೋಜನೆಗಳನ್ನು 10 ಸಾವಿರ ಕೋಟಿ ರು. ವೆಚ್ಚದಲ್ಲಿ ಪೂರ್ಣ ಮಾಡಲಾಗಿದೆ ಎಂದರು.
ದೇವನಹಳ್ಳಿಯಲ್ಲಿ ಮಿನಿ ವಿಧಾನಸೌಧ, ಅಂಬೇಡ್ಕರ್ ಭವನಕ್ಕೆ ಆರು ಕೋಟಿ ರು, ಅಂಬೇಡ್ಕರ್ ಪ್ರತಿಮೆಗೆ 28 ಲಕ್ಷ ರು, ವಾಲ್ಮೀಕಿ ಭವನಕ್ಕೆ ಒಂದು ಕೋಟಿ, ಬಾಬು ಜಗಜೀವನರಾಂ ಭವನಕ್ಕೆ ಒಂದು ಕೋಟಿ ರು. ನಮ್ಮ ಸರ್ಕಾರ ನೀಡಿದ್ದು ಇಲ್ಲಿನ ಶಾಸಕರು ನಾನು ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ಎಂಟು ತಿಂಗಳ ಅವಧಿಯಲ್ಲಿ ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಆಡಳಿತ ನೀಡಿದ್ದಾಗಿ ಅವರು ತಿಳಿಸಿದರು.
ಟಿಕೆಟ್ ನೀಡದೇ ವಂಚನೆ: ಇದೇ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಚಂದ್ರಣ್ಣರವರು ಮಾತನಾಡಿ ತಮಗೆ ಜೆಡಿಎಸ್ ಮುಖಂಡರು ಟಿಕೆಟ್ ನೀಡದೆ ವಂಚಿಸಿದ್ದು, ತಮ್ಮ ಗಮನಕ್ಕೆ ಬಾರದೆ ಮತ್ತೊಬ್ಬರಿಗೆ ಟಿಕೆಟ್ ನೀಡಿ ನನ್ನನ್ನು ಅವಮಾನಿಸಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದ ಕಾರಣಕ್ಕಾಗಿ ಜೆಡಿಎಸ್ ವರಿಷ್ಠರು ಮೋಸ ಮಾಡಿದ್ದಾರೆ ಎಂದರು. ಸಿ.ಎಂ.ಜಗದೀಶ ಶೆಟ್ಟರ್, ಆರ್. ಅಶೋಕ್, ಅನಂತಕುಮಾರ್ ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ತಮ್ಮ ಪಕ್ಷದಿಂದ ಟಿಕೆಟ್ ನೀಡಿರುವುದಕ್ಕೆ ಅಭಿನಂದಿಸಿದರು.
ಬಿಜೆಪಿ ರಾಜ್ಯ ಮುಖಂಡರಾದ ಎಂ.ನಾರಾಯಣ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್, ಜಿಲ್ಲಾ ಕಾರ್ಯದರ್ಶಿ ದೇ.ಸೂ.ನಾಗರಾಜ್, ರಾ.ಪರಿಷತ್ ಸದಸ್ಯರಾದ ಎ.ಸಿ.ಗುರುಸ್ವಾಮಿ, ತಾಲೂಕು ಅಧ್ಯಕ್ಷರಾದ ಹನುಮಂತರಾಯಪ್ಪ ಹಾಗೂ ಮುಖಂಡರು ಭಾಗವಹಿಸಿದ್ದರು.