'ಸುಭದ್ರ ಸರ್ಕಾರಕ್ಕೆ ಮತದಾನ ಮಾಡಿ'
ಬೆಂಗಳೂರು: ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆ ಆಗಬೇಕಿದ್ದರೆ ಸಾರ್ವಜನಿಕರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಹ್ಮಣ್ಯ ಅವರು ಹೇಳಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಪ್ರ ಬಾಂಧವರ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಷ್ಟ್ರ ಅಥವಾ ರಾಜ್ಯದ ಶಾಸನ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದ್ದರೆ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಅನಿವಾರ್ಯ. ಆದರೆ ಹಿಂದಿನ ಹಲವು ಚುನಾವಣೆಗಳ ಸೋಲು- ಗೆಲುವುಗಳನ್ನು ವಿಮರ್ಶಿಸಿದಾಗ ಜನತೆ ಪೂರ್ಣ ಪ್ರಮಾಣದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ಕಂಡು ಬಂದಿದೆ. ಹಾಗಾಗಿಯೇ ಸುಶಿಕ್ಷಿತ, ಸುಸಂಸ್ಕೃತ ಹಾಗೂ ರಾಜಕೀಯ ಅನುಭವ ಇರುವ ಪ್ರತಿನಿಧಿಗಳು ಆಯ್ಕೆಯಾಗದೇ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿದೆ. ಅಂತಹ ಪರಿಸ್ಥಿತಿ ಮರುಕಳಿಸದೇ ಇರಬೇಕಾದರೆ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಿಳಿಸಿದರು. ಆ ನಿಟ್ಟಿನಲ್ಲಿ ವಿಪ್ರ ಸಮುದಾಯದವರೆಲ್ಲರೂ ಶೇ.100ರಷ್ಟು ಮತ ಚಲಾಯಿಸುವಂತೆಯೂ ಅವರ ಇದೇ ವೇಳೆ ಕೋರಿದರು.
ಚುನಾವಣಾ ಪ್ಯಾಷನ್ ಶೋ..!
ಇದು ಅಂತಿಂಥ ಪ್ಯಾಷನ್ ಶೋ ಅಲ್ಲ, ಚುನಾವಣಾ ಪ್ಯಾಷನ್ ಶೋ..! ಚುನಾವಣೆಗೂ ಪ್ಯಾಷನ್ ಶೋಗೂ ಎಲ್ಲಿಂದೆಲ್ಲಿಯ ಸಂಬಂಧ ? ಎಂಬ ಪ್ರಶ್ನೆಯೇ. ಮತದಾನದ ಬಗ್ಗೆ ಜಾಗೃತಿ ಮತ್ತು ಉತ್ತಮ ಅಭ್ಯರ್ಥಿ ಆಯ್ಕೆ ಕುರಿತು ಅರಿವು ಮೂಡಿಸಲು ಪ್ಯಾಷನ್ ಶೋ ಮಾರ್ಗ ಕಂಡುಕೊಳ್ಳಲಾಗಿದೆ. ಇನ್ನೂ ಅಚ್ಚರಿ ವಿಚಾರವೆಂದರೆ, ಈ ಫ್ಯಾಷನ್ ಶೋ ನಡೆಸುತ್ತಿರುವುದು ಒಬ್ಬ ಸ್ವಾಮೀಜಿ! ಅಂದ ಹಾಗೆ, ಕಡ್ಡಾಯ ಮತದಾನ ಆಗುವಂತೆ ಮಾಡಲು ಚುನಾವಣಾ ಆಯೋಗ ಏನೆಲ್ಲಾ ಕಸರತ್ತು ನಡೆಸುತ್ತಿದೆ. ಆದರೆ, ಫ್ಯಾಷನ್ ಶೋ ನಡೆಸಿ ಯುವ ಮತ್ತು ಹೊಸ ಮತದಾರರನ್ನು ಆಕರ್ಷಿಸಲು ಆಯೋಗಕ್ಕೆ ಆಗುವುದೇ...? ಅದು ಸಾಧ್ಯವಿಲ್ಲ ಎಂದೇ ಇಲ್ಲೊಬ್ಬ ಸ್ವಾಮೀಜಿ ಎಲೆಕ್ಷನ್ ಫ್ಯಾಷನ್ ಶೋ ನಡೆಸಿ ಯುವ ಜನತೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾರಲು ಹೊರಟಿದ್ದಾರೆ. ಹೀಗಾಗಿ ಬುಧವಾರ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಫ್ಯಾಷನ್‌ಶೋ ನಡೆಯಲಿದ್ದು, ಅನೇಕ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ರಂಜಿಸಲಿದ್ದಾರೆ. ಇವರ ಬೆಕ್ಕಿನ ನಡಿಗೆ ನೋಡಿ ಯುವಕರು ಕೇವಲ ಶಿಳ್ಳೆ ಹಾಕಿ ನಲಿಯುವುದಕ್ಕಷ್ಟೇ ಸೀಮಿತವಾಗುವುದಿಲ್ಲ. ಬದಲಾಗಿ ಹೆಜ್ಜೆಹೆಜ್ಜೆಗೂ ಕಡ್ಡಾಯ ಮತದಾನದ ಅಗತ್ಯತೆ ಹೇಳಲಾಗುತ್ತದೆ.
ಯಾರು ರೂವಾರಿ?: ಸಂಜಯ್‌ನಗರದಲ್ಲಿರುವ ಜಗನ್ನಾಥ ಸ್ವಾಮೀಜಿ ಈ ಫ್ಯಾಷನ್ ಶೋ ಆಯೋಜಕರು. ಬೆಂಗಳೂರಿನಲ್ಲಿ ಕಳೆದ ಬಾರಿ ಮತದಾನ ನಡೆದಿದ್ದು ಶೇ. 49ರಷ್ಟು ಮಾತ್ರ. ಈ ಚುನಾವಣೆಯಲ್ಲಿ ಮತ್ತೆ ಇಂಥ ಸ್ಥಿತಿ ಬರಬಾರದು ಎಂದು ಜಗನ್ನಾಥ ಸ್ವಾಮೀಜಿ ವಿನೂತನ ರೀತಿ ಜಾಗೃತಿಗೆ ಕೈ ಹಾಕಿದ್ದಾರೆ. ಈ ವೇಳೆ'ರಾಮರಾಜ್ಯ' ವಿಶೇಷ ಪ್ರಣಾಳಿಕೆ ಬಿಡುಗಡೆಗೊಳಿಸಲಿದ್ದಾರೆ.