5 ಕೋಟಿ 34 ಮಂದಿಗೆ ಹಂಚಿದ್ದ ಹೆಮ್ಮನಹಳ್ಳಿ ಚಂದ್ರಶೇಖರ!
ಕ.ಪ್ರ.ವಾರ್ತೆ ಮಂಡ್ಯ ಆ.5
ಮಂಡ್ಯ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 21.50 ಕೋಟಿ ಗುಳುಂ ಪ್ರಕರಣ ಜನರ ಮನಸ್ಸಿನಿಂದ ಅಳಿಸಿ ಹೋಗುವುದಕ್ಕೂ ಮುನ್ನವೇ ಈ ಪ್ರಕರಣದ ಮತ್ತೊಂದು ಹೊಸ ಸುಳಿವು ಈಗ ಲಭ್ಯವಾಗಿದೆ.
ಮಂಡ್ಯ ಇಂಡಿಯನ್ ಬ್ಯಾಂಕ್ನಲ್ಲಿರುವ ಬಂಧಿತ ಪ್ರಮುಖ ಆರೋಪಿಗಳಲ್ಲಿ ಒಬ್ಬ ಹೆಮ್ಮನಹಳ್ಳಿ ಚಂದ್ರಶೇಖರ್ ಖಾತೆಗೆ ಜಮೆ ಆಗಿರುವ 5 ಕೋಟಿಗಳಲ್ಲಿ ಈ ಚಂದ್ರಶೇಖರ್, ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ, ರೂಪೇಶ್, ರಾಣಿ ಎಂಬವರೂ ಸೇರಿದಂತೆ 34 ಮಂದಿಗೆ ಹಂಚಿಕೆ ಮಾಡಿದ್ದಾನೆ ಎಂಬ ಅಂಶ ದಾಖಲೆಗಳಿಂದ ಬಹಿರಂಗಗೊಂಡಿದೆ.
ಈ 34 ಮಂದಿ ಪೈಕಿ 4 ಮಂದಿ ಹೆಸರು ಮಾತ್ರ ಬಹಿರಂಗವಾಗಿದೆ. ಉಳಿದ 30 ಮಂದಿ ಖಾತೆದಾರರು ಯಾರು, ಯಾವ ಪ್ರಮಾಣದಲ್ಲಿ ನೀಡಲಾಗಿದೆ ಎಂಬುದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆದರೂ ಅದನ್ನು ಬಹಿರಂಗಗೊಳಿಸಲು ಪೊಲೀಸರು ಸಿದ್ಧರಿಲ್ಲ. ಈಗ ಲಭ್ಯ ಮಾಹಿತಿಯಂತೆ ಸಿಕ್ಕಿರುವ ಮಹತ್ವದ ಸುಳಿವಿನಲ್ಲಿ ತನಿಖೆಯನ್ನು ಮತ್ತಷ್ಟು ಚುರುಕಗೊಳಿಸಲು ಸಾಕಷ್ಟು ಅವಕಾಶವಿದೆ ಇದೆ ಎಂದಷ್ಟೇ ಪೊಲೀಸ್ ಮೂಲಗಳು ಹೇಳಿವೆ.
ಆರೋಪಿ ಚಂದ್ರಶೇಖರ್ 34 ಮಂದಿಗೂ ಚೆಕ್ ಮೂಲಕವೇ ಹಣ ನೀಡಿದ್ದಾನೆ. ಯಾರಿಗೆ ಎಷ್ಟು ಪ್ರಮಾಣದಲ್ಲಿ ನೀಡಿದ್ದಾನೆ ಮತ್ತು ಯಾವ ಉದ್ದೇಶಕ್ಕಾಗಿ ನೀಡಿದ್ದಾನೆ ಎಂಬುದೇ ಪ್ರಮುಖವಾಗಿ ತನಿಖೆಯಾಗಬೇಕಿದೆ.
ರಾ-ಚ ಪ್ರಾಧಿಕಾರ ಹಣ ಹಂಚಿಕೆ ಹೇಗೆ?: ಅದೇ ರೀತಿಯಲ್ಲಿ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 16.50 ಕೋಟಿ ಇದೇ ಜಾಲ ಲಪಟಾಯಿಸಿದೆ ಎಂಬ ಸತ್ಯ ಸದ್ಯದ ತನಿಖೆಯಿಂದ ಬಹಿರಂಗವಾಗಿದೆ. ಮಂಡ್ಯದ ಇಂಡಿಯನ್ ಬ್ಯಾಂಕ್ ಮಾತ್ರವಲ್ಲದೇ ಬ್ಯಾಂಕ್ ಆಫ್ ಬರೋಡ, ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್ ಹಾಗೂ ಬ್ಯಾಂಕ್ ಇಂಡಿಯಾದಲ್ಲೂ ಠೇವಣಿ ಇಟ್ಟಿದ್ದ ಹಣವನ್ನು ಜಾಲ ಗುಳುಂ ಮಾಡಿರುವ ಬಗ್ಗೆ ಸಮಗ್ರ ತನಿಖೆ ಆರಂಭವಾಗದೇ ಇರುವುದು ಜನರಿಗೆ ಸಾಕಷ್ಟು ಅನುಮಾನ ಹುಟ್ಟಿಸುತ್ತದೆ.
ರಾ-ಚ ಪ್ರಾಧಿಕಾರಕ್ಕೆ ಸೇರಿದ 16.50 ಕೋಟಿ, ಯಾವ ಖಾತೆಯಿಂದ, ಯಾರಿಗೆ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಯಾವ ಆರೋಪಿಯ ಪಾತ್ರ ಎಷ್ಟಿದೆ ಎಂಬುದು ಮಾತ್ರ ಇನ್ನೂ ಹೊರಗೆ ಬಂದಿಲ್ಲ.
ರಾ-ಚ ಪ್ರಾಧಿಕಾರದ ಗತಿ ಏನು?: ಈ ನಡುವೆ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 16.50 ಕೋಟಿ ಹಗರಣದ ತನಿಖೆ ಸ್ವರೂಪವೇ ನಿಗೂಢವಾಗಿದೆ. ಈ ಪ್ರಕರಣದ ತನಿಖೆ ಆರಂಭಿಸಿದ್ದ ರಾಮನಗರ ಪೊಲೀಸರು ತನಿಖೆಯನ್ನು ನಡು ನೀರಿನಲ್ಲಿ ಕೈ ಬಿಟ್ಟು ಕುಳಿತಿದ್ದಾರೆ ಎಂಬ ದೂರುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.
ವಂಚಕರ ಜಾಲದ ಪ್ರಮುಖ ಆರೋಪಿಗಳಾದ ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ, ಹೆಮ್ಮನಹಳ್ಳಿ ಚಂದ್ರಶೇಖರ್ ಹಾಗೂ ಆಯುಕ್ತ ಚಿದಾನಂದ ಸೇರಿಕೊಂಡು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ 16.50 ಕೋಟಿ ಹಣ ನುಂಗಿ ನೀರು ಕುಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ. ಆದರೂ ಇಷ್ಟೊಂದು ಪ್ರಮಾಣದ ಹಣವನ್ನು ಪ್ರಾಧಿಕಾರಕ್ಕೆ ಹೇಗೆ ವಾಪಸ್ಸು ತರುವುದರ ಬಗ್ಗೆ ಮತ್ತು ಯಾವ ಕಾರಣಕ್ಕಾಗಿ ಇಷ್ಟೊಂದು ಹಣ ಈ ಆರೋಪಿಗಳಿಗೆ ನೀಡಲಾಗಿತ್ತು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿಗಳೇ ಲಭ್ಯವಾಗದೇ ಇರುವುದು ಪೊಲೀಸರ ತನಿಖೆಯ ವೈಖರಿಯನ್ನು ಪ್ರಶ್ನಿಸುವಂತಿದೆ.