ಉಪಚುನಾವಣೆ 2 ಕುಟುಂಬಗಳ ನಡುವಿನ ಸಂಘರ್ಷವಲ್ಲ: ಡಿಕೆಶಿ
ಚನ್ನಪಟ್ಟಣ: ಲೋಕಸಭಾ ಉಪಚುನಾವಣೆ ಎರಡು ಕುಟುಂಬಗಳ ನಡುವಿನ ಸಂಘರ್ಷವಲ್ಲ ಪಕ್ಷ, ತತ್ವ, ಅಭಿವೃದ್ಧಿಯ ಆಧಾರದ ಮೇಲೆ ನಡೆಯುವ ಮತಸಮರ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪಟ್ಟಣದ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆ ಎರಡು ಕುಟುಂಬಗಳಿಗಿಂತ ಎರಡು ಪಕ್ಷಗಳ ನಡುವೆ ನಡೆಯುತ್ತಿದ್ದು ಅಭಿವೃದ್ಧಿಯ ವಿಚಾರದ ಮೇಲೆ ನಾವು ಮತಯಾಚನೆ ಮಾಡುತ್ತೇವೆ, ಮತದಾರರು ನಮಗೆ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ನನ್ನ ತಮ್ಮ ಎನ್ನುವುದಕ್ಕಿಂತ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ನಮ್ಮ ಹೈಕಮಾಂಡ್ ಕಣಕ್ಕಿಳಿಸಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಜನಪರ ಆಡಳಿತವೇ ನಮ್ಮ ಗೆಲವಿಗೆ ಶ್ರೀರಕ್ಷೆ ಎಂದರು.
ಯೋಗೇಶ್ವರ್ ಜತೆ ಮಾತಾಡಿದ್ದೇನೆ: ಯೋಗೇಶ್ವರ್ ಕಾಂಗ್ರೆಸ್ನಲ್ಲೇ ಇದ್ದವರು ಅವರ ಜತೆ ಇರುವವರು ಕಾಂಗ್ರೆಸ್ ಕಟ್ಟಿದ್ದಾರೆ. ಆ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಬನ್ನಿ ಎಂದು ಕರೆಯುತ್ತಿದ್ದೇನೆ, ಅಂತೆಯೇ ಯೋಗೇಶ್ವರ ಜತೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಅವರು ತಿಳಿಸಿದರು.
ಆನಂದಸ್ವಾಮಿ ಕಾಂಗ್ರೆಸ್ಗೆ ಸೇರ್ಪಡೆ
ಚನ್ನಪಟ್ಟಣ: ತಾಲೂಕಿನ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂಬ ಸತ್ಯ ಮನವರಿಕೆಯಾದ ಹಿನ್ನೆಲೆಯಲ್ಲಿ ಮಾತೃಪಕ್ಷಕ್ಕೆ ಹಿಂದಿರುಗಿರುವುದಾಗಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆನಂದಸ್ವಾಮಿ ತಿಳಿಸಿ ದರು. ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ನಮಗೆ ಒಪ್ಪಿಗೆಯಾಗದೆ ಅಲ್ಲಿ ಹುಸಿರು ಗಟ್ಟಿದ ವಾತಾವರಣದಲ್ಲಿ ಇರಲಾಗದೆ ಪಕ್ಷಾಂತರ ಮಾಡುತ್ತಿರುವುದಾಗಿ ತಿಳಿಸಿದರು.