ಏಕಾಗ್ರತೆಯ ಸಂಕಲ್ಪದಿಂದ ಸಾಧನೆ ಸುಲಭ: ಡಾ.ಎ.ಒ.ಆವಲಮೂರ್ತಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಆ. 5
ಏಕಾಗ್ರತೆಯಿಂದ ಮಾತ್ರ ಸಾಧನೆಯ ಸಂಕಲ್ಪ ಸಾಫಲ್ಯವಾಗುತ್ತದೆ. ನಮ್ಮಲ್ಲಿರುವ ಜ್ಞಾನ-ಚಿಂತನೆಗಳೆಲ್ಲವೂ ಏಕಾಗ್ರತೆಯ ಕೊರತೆಯಿಂದಲೇ ಸೋಲುತ್ತಿದ್ದು, ಯಶಸ್ಸಿನ ಮೆಟ್ಟಿಲೇರಲು ಮನೋನಿಗ್ರಹ ಮುಖ್ಯ ಎಂದು ಲೇಖಕ ಡಾ.ಎ.ಓ.ಆವಲಮೂರ್ತಿ ಹೇಳಿದರು.
ಇಲ್ಲಿನ ಶ್ರೀಗಾಯತ್ರಿ ಪೀಠ ಮಿತ್ರ ಬಳಗ ನೇತೃತ್ವದಲ್ಲಿ ಯುವಬಳಗ ಮತ್ತು ಮಹಿಳಾ ಬಳಗದ ಸಹಯೋಗದಲ್ಲಿ ಎಂಆರ್ಎಸ್ ಪುಸ್ತಕ ನಿಧಿಯಿಂದ ನಡೆದ ಪದವಿ ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇಂದು ಅಂಕಗಳ ಮೋಹ ಹೆಚ್ಚುತ್ತಿದೆ. ಹೀಗಾಗಿ ಗುಣಾತ್ಮಕ ಶಿಕ್ಷಣ ಮರೀಚಿಕೆಯಾಗಿದೆ. ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡದ ಶಿಕ್ಷಣ ಅರ್ಥಹೀನ. ಮನುಷ್ಯರನ್ನು ಮನುಷ್ಯರನ್ನಾಗಿರುವ ಅನಿವಾರ್ಯತೆ ಇಂದು ಹೆಚ್ಚಿದೆ. ಎಲ್ಲ ಆಲೋಚನೆಗಳೂ ಕಾರ್ಯರೂಪಕ್ಕೆ ಬರುವಾಗ ವೈಜ್ಞಾನಿಕ ಚಿಂತನೆ ಮುಖ್ಯ. ತಪ್ಪಿದಲ್ಲಿ ಅಡ್ಡದಾರಿ ಹಿಡಿಯುವ ಚಿಂತನೆಗಳೇ ಹೆಚ್ಚು ಎಂದು ಅವರು ವಿವರಿಸಿದರು.
ನಗರಸಭಾ ಮಾಜಿ ಅಧ್ಯಕ್ಷ ಜೆ.ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಸದಸ್ಯ ಕೆ.ಜಿ.ರಘುರಾಂ ಅಧ್ಯಕ್ಷತೆ ವಹಿಸಿದ್ದರು. ಐಎಎಸ್ ಅಧಿಕಾರಿ ಲೋಕನಾಥ್, ಕಾಂಗ್ರೆಸ್ ಯುವ ಮುಖಂಡ ಕೆ.ಜಿ.ಅಶೋಕ್, ಬಿಜೆಪಿ ನಗರ ಮಾಜಿ ಕಾರ್ಯದರ್ಶಿ ಡಿ.ಎಲ್.ಸತ್ಯನಾರಾಯಣ್, ಗಾಯತ್ರಿಪೀಠ ಮಿತ್ರ ಬಳಗದ ಅಧ್ಯಕ್ಷ ಎಸ್.ಶಿವಾನಂದ್, ವಿಜಯಾಬ್ಯಾಂಕ್ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ, ಮಿತ್ರ ಬಳಗ ಖಜಾಂಚಿ ವೆಂಕಟೇಶ್, ಸಲಹೆಗಾರ ರವಿಕಿರಣ್, ಪುಸ್ತಕ ನಿಧಿಯ ಎಲ್.ಎನ್.ನಾಗರಾಜ್, ಯುವ ಬಳಗದ ಉಮಾಶಂಕರ್, ಸಾಸಾ ನರೇಂದ್ರ, ಗೋಪಾಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಥಮ ಮತ್ತು ದ್ವಿತೀಯ ಪಿಯುಸಿ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಸಿಎ ಸೇರಿದಂತೆ ವಿವಿಧ ಪದವಿಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.