ಕೊನೆಗೂ ಹೆಮ್ಮನಹಳ್ಳಿ ಚಂದ್ರಶೇಖರ್ ಬಂಧನ
ಮಂಡ್ಯ: ಮಂಡ್ಯ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ ಕೋಟ್ಯಂತರ ರು. ಗುಳಂ ಮಾಡಿದ ಜಾಲದ ಪ್ರಮುಖ ಆರೋಪಿ ಹೆಮ್ಮನಹಳ್ಳಿ ಚಂದ್ರಶೇಖರ್ನನ್ನು ಕೊನೆಗೂ ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿವೈಎಸ್ಪಿ ಶೋಭಾರಾಣಿ ನೇತೃತ್ವದ ತನಿಖಾ ತಂಡ ಬೆಂಗಳೂರು, ತಮಿಳುನಾಡಿನ ಕೆಲವು ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಹೆಮ್ಮನಹಳ್ಳಿ ಚಂದ್ರಶೇಖರ್ ಸುಮಾರು 25 ದಿನಗಳ ಕಾಲ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿದ್ದು ಮಾತ್ರ ಸತ್ಯ. ಆದರೆ, ಈಗ ಈತನನ್ನು ರಾಮನಗರದ ಬಸ್ ಸ್ಟ್ಯಾಂಡ್ನಲ್ಲಿ ಬಂಧಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿ ಹೆಮ್ಮನಹಳ್ಳಿ ಚಂದ್ರಶೇಖರ್ನನ್ನು ಮಂಡ್ಯದ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭ ಆರೋಪಿಯನ್ನು ಹೆಚ್ಚಿನ ವಿಚಾರಣೆ ಮಾಡುವ ಅಗತ್ಯವಿದೆ. ಹೀಗಾಗಿ, ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮಾಡಿದ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಆ.13 ರವರೆಗೆ ಪೊಲೀಸ್ ಕಸ್ಟಡಿ ವಹಿಸಿದ್ದಾರೆ. ಮಂಡ್ಯ ಹಾಗೂ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 21.50 ಕೋಟಿಗೆ ಪಂಗನಾಮ ಹಾಕಿದ ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ ಜಾಲದಲ್ಲಿ ನೇರ ಪಾಲುದಾರನಾಗಿರುವ ಹೆಮ್ಮನಹಳ್ಳಿ ಚಂದ್ರಶೇಖರ್ನ, ಮಂಡ್ಯದ ಇಂಡಿಯನ್ ಬ್ಯಾಂಕ್ ಖಾತೆ (ಖಾತೆ ಸಂಖ್ಯೆ- 6060020206)ಗೆ ಹಣದ ಹೊಳೆಯೇ ಹರಿದು ಬಂದಿದೆ.