ಚೆಕ್ ಬೌನ್ಸ್: ನಟ ದ್ವಾರಕೀಶ್ಗೆ ನೋಟಿಸ್
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಂಬಂಧ ನಟ, ನಿರ್ಮಾಪಕ ದ್ವಾರಕೀಶ್ಗೆ 21ನೇ ಎಸಿಎಂಎಂ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ. ನ್ಯಾಯಾಧೀಶರು ಸೋಮವಾರ ನೋಟೀಸ್ ಹೊರಡಿಸಿದ್ದು, ಆಗಸ್ಟ್ 7ರಂದು ದ್ವಾರಕೀಶ್ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಚಾರುಲತಾ ಚಿತ್ರ ನಿರ್ಮಾಣದ ವೇಳೆ ದ್ವಾರಕೀಶ್ ಅವರು ನಿರ್ಮಾಪಕ ಹಾಗೂ ಉದ್ಯಮಿ ಕೆ.ಸಿ.ಎನ್.ಚಂದ್ರಶೇಖರ್ ಎಂಬುವವರಿಂದ ರು. 50 ಲಕ್ಷ ಸಾಲ ಪಡೆದಿದ್ದರು. ಅದಕ್ಕೆ ಆಂಧ್ರ ಬ್ಯಾಂಕ್ವೊಂದರ ಚೆಕ್ ನೀಡಿದ್ದರು. ಆದರೆ, ಆ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಚಂದ್ರಶೇಖರ್ ಅವರು 21ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ದ್ವಾರಕೀಶ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ವಿದ್ಯುತ್ ತಂತಿ ಶಾಕ್ಕಾರ್ಮಿಕ ಸಾವು
ರಾಮನಗರ: ಪ್ರಾರ್ಥನಾ ಮಂದಿರದ ಮೇಲೆ ನಿಂತು ದುರಸ್ಥಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಮಂದಿರ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ಶಾಕ್ ತಗುಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ನಗರದ ಗೌಸಿಯಾ ನಗರದಲ್ಲಿ ನಡೆದಿದೆ. ಬೀದರ್ ಮೂಲದ ಕಾರ್ಮಿಕ ಬಸವರಾಜು (45) ಮೃತ ವ್ಯಕ್ತಿ. ಸೋಮವಾರ ಬೆಳಗ್ಗೆ 11ರ ಸಮಯದಲ್ಲಿ ಪ್ರಾರ್ಥನಾ ಮಂದಿರದ ಮೇಲೆ ಕೆಲಸ ಮಾಡುತ್ತಿದ್ದ. ಕಟ್ಟಡದ ಮೇಲೆ ಹಾಯ್ದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ಲೈನ್ನಿಂದ ಪಿಲ್ಲರ್ಗೆ ವಿದ್ಯುತ್ ಪ್ರವಹಿಸಿದೆ. ಇದರಿಂದ ಪಕ್ಕದಲ್ಲೇ ಇದ್ದ ಬಸವರಾಜು ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ. ಈ ಸಂಬಂಧ ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ತೆರಿಗೆ ನಿಗದಿಗೆ ಲಂಚ; 15 ತಿಂಗಳ ಸಜೆ
ಬೆಂಗಳೂರು: ಕಂಪ್ಯೂಟರ್ ಮಳಿಗೆಯ ಮೌಲ್ಯವರ್ಧಿತ ತೆರಿಗೆ ಪುನರ್ನಿಗದಿಪಡಿಸಲು 10 ಸಾವಿರ ಲಂಚ ಪಡೆದ ವಾಣಿಜ್ಯ ತೆರಿಗೆ ಅಧಿಕಾರಿ ಆರ್. ಉಷಾಬಾಯಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 15 ತಿಂಗಳ ಕಠಿಣ ಸಜೆ ಹಾಗೂ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 2008ರ ನವೆಂಬರ್ 10 ರಂದು ಮಂಜು ಬನ್ಸಾಲಿ ಎಂಬುವವರಿಂದ ಮೌಲ್ಯವರ್ಧಿತ ತೆರಿಗೆ ಪುನರ್ ನಿಗದಿಪಡಿಸಲು 10 ಸಾವಿರ ಲಂಚ ಪಡೆಯುವಾಗ ಉಷಾಬಾಯಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿದ್ದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 7ರ ಪ್ರಕಾರ 9 ತಿಂಗಳ ಕಠಿಣ ಸಜೆ ಹಾಗೂ 3 ಸಾವಿರ ದಂಡ ಹಾಗೂ ಕಲಂ 13(1)ಡಿ 13(2) ಅನ್ವಯ 15 ತಿಂಗಳು ಕಠಿಣ ಸಜೆ ಹಾಗೂ 4 ಸಾವಿರ ದಂಡ ವಿಧಿಸಲಾಗಿದೆ.