ಪ್ರಯಾಣ ದರ ಏರಿಕೆ ವಿರೋಧಿಸಿ ಬಸ್ ದಿನದಂದು ಕಪ್ಪುದಿನ
ದೊಡ್ಡಬಳ್ಳಾಪುರ: ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ವಿರೋಧಿಸಿ ಬೆಂಗಳೂರು ಪ್ರಯಾಣಿಕರ ವೇದಿಕೆ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಹತ್ತಾರು ಪ್ರಯಾಣಿಕರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಬೆಳಗ್ಗೆ ಕಪ್ಪುದಿನ ಆಚರಣೆ ನಡೆಸಿದರು. ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ದರ ಏರಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪದೇ ಪದೇ ಹೇಳುತ್ತಿದೆ. ಆದರೆ ಏರಿಕೆಯಾಗಿರುವ ಡೀಸೆಲ್ ದರ ಮತ್ತು ಬಸ್ ದರದ ಸರಾಸರಿಯನ್ನು ನೋಡಿದರೆ ಬಸ್ ಪ್ರಯಾಣ ತೀರಾ ದುಬಾರಿ ಎನಿಸಿದೆ. ಕಳೆದ 11 ತಿಂಗಳಲ್ಲಿ ಆಗಿರುವ ಡೀಸೆಲ್ ಬೆಲೆ ಏರಿಕೆಯ ಪ್ರಮಾಣಕ್ಕಿಂತ ಬಸ್ ಪ್ರಯಾಣದರ ತೀವ್ರಗತಿಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಪ್ರಯಾಣಿಕರ ಮೇಲೆ ಹೊರೆ ಬೀಳುತ್ತಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಈ ಅವೈಜ್ಞಾನಿಕ ದರ ಹೆಚ್ಚಳ ನೀತಿ ಖಂಡನೀಯ ಎಂದರು. 2012ರ ಸೆಪ್ಟೆಂಬರ್ನಿಂದೀಚೆಗೆ 2ನೇ ಹಂತಕ್ಕೆ ಶೇ.29, 10ನೇ ಹಂತಕ್ಕೆ ಶೇ.46 ಹಾಗೂ 20ನೇ ಹಂತಕ್ಕೆ ಶೇ.44 ಪ್ರಯಾಣ ದರ ಏರಿಕೆ ಮಾಡಲಾಗಿದೆ. ಆದರೆ ಒಟ್ಟಾರೆ ಡೀಸೆಲ್ ದರ ಶೇ.19ರಷ್ಟು ಮಾತ್ರ ಏರಿಕೆ ಆಗಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದೆ ಎಂಬುದು ಗೋಚರವಾಗುತ್ತದೆ. ಈ ಕೂಡಲೇ ಏರಿಕೆ ಮಾಡಿರುವ ದರ ಇಳಿಸಬೇಕು ಎಂದು ಆಗ್ರಹಿಸಿ ಬಸ್ದಿನದಂದು ಕಪ್ಪುದಿನವಾಗಿ ಆಚರಿಸಲಾಗುತ್ತದೆ ಎಂದು ವಿವರಿಸಿದರು. ಬೆಂಗಳೂರಿನ ಕೆಂಪೇಗೌಡ ಬಸ್ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ವಿದ್ಯಾರಣ್ಯಪುರ, ಹೆಬ್ಬಾಳ, ನೀಲಸಂದ್ರ ಬಸ್ ನಿಲ್ದಾಣಗಳು, ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ನೆಲಮಂಗಲ ಬಸ್ ನಿಲ್ದಾಣಗಳಲ್ಲಿ ಇಂದು ಕಪ್ಪುದಿನ ಆಚರಿಸಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು. ಪ್ರಯಾಣಿಕರ ವೇದಿಕೆ ಪ್ರತಿಭಟನೆಗೆ ದೊಡ್ಡಬಳ್ಳಾಪುರದ ಕೆಲ ಸಂಘಟನೆಗಳು ಸಹಕಾರ ನೀಡಿದ್ದವು.
ಜಿಲ್ಲಾಧಿಕಾರಿಗಳ ವಿರುದ್ಧ ಸಿಎಂ ಸಿದ್ದು ಗರಂ
ಬೆಂಗಳೂರು: ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ವಿಭಾಗೀಯ ಆಯುಕ್ತರ ಸಭೆಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಗಳು ಕಾರ್ಯಾಂಗದ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಮುನಿಸು ತೋರಿದ್ದಾರೆ. ಮುಖ್ಯಮಂತ್ರಿಗಳ ಈ ಕೋಪಕ್ಕೆ ಕಾರಣವಾಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ವಿ. ಯಶವಂತ್ ಅವರು ನೀಡಿದ ಹೇಳಿಕೆ. ತಮ್ಮ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಯೋಜನೆ ಜಾರಿಯಾಗಿರುವುದೇ ಗೊತ್ತಿಲ್ಲ ಎಂದು ಅವರು ಸಭೆಯಲ್ಲಿ ಹೇಳಿದ್ದು ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣವಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಯಾದ ಯೋಜನೆ ನಿಮ್ಮ ಜಿಲ್ಲೆಯಲ್ಲೂ ಜಾರಿಯಾಗಿದೆ. ಇದು ಗೊತ್ತಿಲ್ಲ ಎಂದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಆದರೂ ಜಿಲ್ಲಾಧಿಕಾರಿ ಗೊತ್ತಿಲ್ಲ ಎಂದು ವಾದ ಮಾಡಿದಾಗ, 'ಒಬ್ಬ ಜಿಲ್ಲಾಧಿಕಾರಿಯಾಗಿ ಈ ಮಾತನ್ನು ಹೇಳುವುದು ಕರ್ತವ್ಯ ಲೋಪವಾಗುತ್ತದೆ. ಇದು ಅತ್ಯಂತ ಬೇಜವಬ್ದಾರಿತನದ ಹೇಳಿಕೆ. ಮತ್ತೇನು ಹೇಳಬೇಡಿ (ಡೋಂಟ್ ಟಾಕ್) ಎಂದು ಕಿಡಿಕಾರಿದರು. ಇದರಿಂದಾಗಿ ಎಲ್ಲ ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಸಂದರ್ಭಾನುಸಾರ ಚಾಟಿ ಬೀಸುವುದಕ್ಕೆ ಕಾರಣವಾಯಿತು.
ಕಾಲಮಿತಿ: ಇದೆಲ್ಲದರ ಜತೆಗೆ ಅಧಿಕಾರಿಗಳಿಗೆ ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಸಾಧಿಸುವುದಕ್ಕೆ ಕಾಲಮಿತಿಯನ್ನು ವಿಧಿಸಲಾಗಿದ್ದು, ಸಪ್ಟೆಂಬರ್ ತಿಂಗಳಲ್ಲಿ ನಡೆಯುವ ಮತ್ತೊಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಜಿಲ್ಲಾಧಿಕಾರಿಗಳಿಗೆ ವಿಧಿಸಿದ ಜವಾಬ್ದಾರಿಯನ್ನು ಖುದ್ದು ವಿಶ್ಲೇಷಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.