ಭಿನ್ನ ಕೋಮಿನವರ ಪ್ರೇಮ ಪ್ರಸಂಗ: ಯುವಕನ ಮೇಲೆ ಹಲ್ಲೆ
ಕುಣಿಗಲ್: ಎರಡು ಬೇರೆ ಬೇರೆ ಕೋಮುಗಳ ಯವಕ-ಯುವತಿಯ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಗುಂಪು ಘರ್ಷಣೆ ನಡೆದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಯಾಗಿಸಿದ ಘಟನೆ ಸೋಮವಾರ ರಾತ್ರಿ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಅಮೃತೂರಿನ ಯುವಕ ಮಾಗಡಿ ತಾಲೂಕಿನ ಮರೂರಿನ ಅನ್ಯ ಕೋಮಿನ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರು ನೆಲಮಂಗಲ ಸಮೀಪದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಹುಡುಗಿಯ ಹುಟ್ಟುಹಬ್ಬವಿತ್ತು. ಹಾಗಾಗಿ ಕೆಲಸ ಮುಗಿಸಿದ ನಂತರ ಎಂಟು ಗಂಟೆ ಸುಮಾರಿಗೆ ಆಕೆ ಪಟ್ಟಣಕ್ಕೆ ಆಗಮಿಸಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಯುವಕ ಬೇಕರಿಯೊಂದರಲ್ಲಿ ತಿಂಡಿ ಕೊಡಿಸಿ, ಆಕೆಯನ್ನು ಮತ್ತೆ ವಾಪಸ್ ಊರಿಗೆ ಕಳುಹಿಸಲು ಅಮೃತೂರು ಕಡೆಗೆ ಹೋಗುವ ಬಸ್ಸುಗಳು ತಂಗುವ ನಿಲ್ದಾಣಕ್ಕೆ ಬಂದಿದ್ದ. ಆಗ,ತಮ್ಮ ಕೋಮಿನ ಯುವತಿ ಬೇರೆ ಕೋಮಿನ ಯುವಕನೊಂದಿಗೆ ಇರುವುದನ್ನು ಸಹಿಸದ ಗುಂಪೊಂದು ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ. ಆಗ ಸ್ಥಳೀಯರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು.
ಅಲ್ಲಿಗೆ ಬಂದ ಪೊಲೀಸರು, ತಮ್ಮ ಕೋಮಿನ ಮುಖಂಡರು ಹಾಗೂ ಪೋಷಕರನ್ನು ಕರೆತರುವಂತೆ ಯುವತಿಗೆ ಸೂಚಿಸಿ, ಯುವಕನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಮರಳಿದರು.
ಈ ವಿಷಯ ಯುವತಿ ಕೋಮಿನವರು ವಾಸಿಸುವ ಪ್ರದೇಶದ ತುಂಬೆಲ್ಲಾ ಹರಡಿ, ಅಮೃತೂರು ಬಸ್ ನಿಲ್ದಾಣ ಬಳಿ ಜಮಾವಣೆಯಾಗತೊಡಗಿದರು. ಒಂದು ಕೋಮಿನ ಜನರು ಜಮಾವಣೆಯಾಗುವುದನ್ನು ಅರಿತು ಮತ್ತೊಂದು ಕೋಮಿನವರು ಜಮಾವಣೆಯಾಗಲು ಪ್ರಾರಂಭಿಸಿದರು. ಆಗ, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್ಐ ಗುರುಪ್ರಸಾದ್ ಮತ್ತು ಸಿಬ್ಬಂದಿ ಲಘು ಲಾಠಿ ಪ್ರಹಾರ ಮಾಡಿ, ನೆರೆದಿದ್ದ ಗುಂಪನ್ನು ಚದುರಿಸಿದರು. ಬಳಿಕ ಪೋಷಕರ ಜತೆ ಯುವತಿಯನ್ನು ಕಳುಹಿಸಿಕೊಟ್ಟರು. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ತುಂಬ ಕುಣಿಗಲ್ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.