ಮಾಸ್ಟರ್ ಮೈಂಡ್ ಚಿದಾನಂದ ತಲೆದಂಡ
ಕ.ಪ್ರ.ವಾರ್ತೆ ರಾಮನಗರ ಆ.5
ಬಹುಕೋಟಿ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್. ಚಿದಾನಂದ ತಲೆದಂಡ ಕಡೆಗೂ ಆಗಿದೆ. ತಡವಾಗಿಯಾದರೂ ಎಚ್ಚೆತ್ತಿರುವ ನಗರಾಭಿವೃದ್ಧಿ ಇಲಾಖೆಯು ಆರೋಪಿಯನ್ನು ಸೇವೆಯಿಂದ ಅಮಾನತುಪಡಿಸಿ ಆದೇಶ ಹೊರಡಿಸಿದ್ದು, ಅದು ಜು.29ರಿಂದ ಜಾರಿಗೆ ಬಂದಿದೆ.
ರಾಮನಗರ ಜಿಲ್ಲಾಧಿಕಾರಿ ಶಿಫಾರಸು ಮತ್ತು ಕೃಷಿ ಇಲಾಖೆ ಟಿಪ್ಪಣಿ ಮೇರೆಗೆ ಚಿದಾನಂದ ಅಮಾನತು ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಎಂ.ವಾಸುದೇವರಾವ್ ಹೊರಡಿಸಿದ್ದಾರೆ. ಈ ಕುರಿತ ಪ್ರತಿ ರಾಮನಗರ ಜಿಲ್ಲಾಡಳಿತ, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರವನ್ನು ಶನಿವಾರವಷ್ಟೇ ತಲುಪಿದೆ.
ಅತ್ತ ಮಂಡ್ಯದಲ್ಲಿ ಮುಡಾ ಆಯುಕ್ತ ಎಚ್.ಎಸ್.ಶಿವರಾಮ್ ಅಮಾನತು ಆದೇಶವು ಅಲ್ಲಿನ ಜಿಲ್ಲಾಧಿಕಾರಿ ಶಿಫಾರಸು ಪತ್ರ ತಲುಪಿದ ಎರಡೇ ದಿನಕ್ಕೆ ಹೊರ ಬಿದ್ದಿತ್ತು. ಆದರೆ, ಚಿದಾನಂದ ನ್ಯಾಯಾಂಗ ಕಸ್ಟಡಿಗೆ ಹೋದ ಎರಡು ವಾರ ಕಳೆದರೂ ಅಮಾನತುಗೊಳ್ಳದಿದ್ದ ಹಿನ್ನೆಲೆಯಲ್ಲಿ ಅನುಮಾನ ಮೂಡಿತ್ತು. ಇದೀಗ ನಿವಾರಣೆಯಾದಂತಾಗಿದೆ.
ಪತ್ರ ವ್ಯವಹಾರ ವಿಳಂಬ: ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬಹುಕೋಟಿ ವಂಚನೆ ಸಂಬಂಧ ಐಪಿಸಿ ಸೆಕ್ಷನ್ 409, 420, 468, 471, 34ರಡಿ ದಾಖಲಾದ ಪ್ರಕರಣಗಳಡಿ ಮೊದಲ ಆರೋಪಿ ಚಿದಾನಂದ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಜು.16ರಂದೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕ ಹುದ್ದೆಯಲ್ಲಿದ್ದ ಚಿದಾನಂದ ನಿಯೋಜನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಜಿಲ್ಲಾಧಿಕಾರಿಯ ಶಿಫಾರಸು ಪತ್ರವು ಮೊದಲಿಗೆ ಕೃಷಿ ಇಲಾಖೆಗೆ ಹೋಗಿತ್ತು. ನಂತರ ನಗರಾಭಿವೃದ್ಧಿ ಇಲಾಖೆಗೆ ರವಾನೆಗೊಂಡು, ತಡವಾಗಿ ಅಮಾನತು ಆದೇಶ ಬಂದಿದೆ.
ಜು.16ರಲ್ಲಿ ರವಾನೆಯಾದ ಜಿಲ್ಲಾಧಿಕಾರಿಯ ಶಿಫಾರಸು ಪತ್ರವು ಕೃಷಿ ಇಲಾಖೆಯಿಂದ ವಿಲೇವಾರಿ ಆಗಿದ್ದು ಜು.25ಕ್ಕೆ. ನಂತರ ನಗರಾಭಿವೃದ್ಧಿ ಇಲಾಖೆ ಜು.29ಕ್ಕೆ ಅಮಾನತು ಆದೇಶ ಹೊರಡಿಸಿದೆ. ಕಾರಣ ಏನೇ ಇದ್ದರೂ ವಿಳಂಬವಂತೂ ಆಗಿದೆ. ಶಿವರಾಮ್ ಅಮಾನತು ಆದೇಶ ತಕ್ಷಣವೇ ಹೊರಬಿದ್ದು, ಚಿದಾನಂದ ಅಮಾನತು ಇಷ್ಟೊಂದು ವಿಳಂಬ ಆಗಿರುವುದನ್ನು ಗಮನಿಸಿದರೆ ಇವರೆಷ್ಟು ಪ್ರಭಾವಿ ಎನ್ನುವುದು ತಿಳಿಯುತ್ತದೆ.
ಜೈಲು ಸೇರಿದ ಚಿದಾನಂದ: ಬೆಂಗಳೂರಿನ ಪಾತಕಿಗಳು, ಬಿಡದಿ ಧ್ಯಾನಪೀಠದ ನಿತ್ಯಾನಂದ ಸೇರಿದಂತೆ ವಿವಿಧ ಆರೋಪಿಗಳು ನ್ಯಾಯಾಂಗ ಕಸ್ಟಡಿಯ ದಿನಗಳನ್ನು ಕಳೆದಿರುವ ರಾಮನಗರ ಜಿಲ್ಲಾ ಕಾರಾಗೃಹವೇ ಈಗ ಚಿದಾನಂದ ವಾಸಸ್ಥಳ. ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ದಿನದಿಂದ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಚಿದಾನಂದ ಶುಕ್ರವಾರವಷ್ಟೇ ಜೈಲು ಸೇರಿದ್ದಾರೆ.
ಚಿದಾನಂದ ಅವರಿಗೆ ರಾಮನಗರ ಜಿಲ್ಲಾಸ್ಪತ್ರೆ, ಜಯದೇವ ಹೃದ್ರೋಗ ಕೇಂದ್ರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ತನ್ಮಧ್ಯೆ, ಆರೋಪಿ ಚಿದಾನಂದ ಅವರಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಈಗಾಗಲೇ ನಡೆದಿದ್ದು, ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ.
ಮತ್ತಿಬ್ಬರು ಪೊಲೀಸ್ ಕಸ್ಟಡಿಗೆ
ಮುಡಾ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಲೂಟಿ ಪ್ರಕರಣದ ಪ್ರಮುಖ ಆರೋಪಿಗಳಾದ ಕೆಬ್ಬಳ್ಳಿ ಆನಂದ, ನಾಗಲಿಂಗಸ್ವಾಮಿ ಅವರನ್ನು ಹತ್ತು ದಿನದವರೆಗೆ ರಾಮನಗರ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನಗರದ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಮನಗರ ಪೊಲೀಸರು ಸಲ್ಲಿಸಿದ್ದ ಪ್ರಥಮ ತನಿಖಾ ವರದಿ ಆಧಾರದ ಮೇಲೆ ಮಂಡ್ಯದ ಉಪ ಕಾರಾಗೃಹದಲ್ಲಿದ್ದ ಕೆಬ್ಬಳ್ಳಿ ಆನಂದ, ನಾಗಲಿಂಗಸ್ವಾಮಿ ಖುದ್ದು ಹಾಜರಿಗೆ ಬಾಡಿ ವಾರೆಂಟ್ ಜಾರಿಯಾಗಿತ್ತು. ಈ ವೇಳೆ ಸ್ಥಳೀಯ ಪೊಲೀಸರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ನ್ಯಾಯಾಧೀಶ ಎಚ್.ಎಸ್.ಹೊಸಗೌಡರ್ ಅವರು ಕಸ್ಟಡಿಗೆ ಒಪ್ಪಿಸಿದರು. ರಾ-ಚ ಪ್ರಾಧಿಕಾರಕ್ಕೆ ವಂಚಿಸಿರುವ ರು.16.50 ಕೋಟಿಯಲ್ಲಿ ಸಾಕಷ್ಟು ಹಣವು ಆರೋಪಿಗಳಿಂದ ಕೆಲ ಸ್ಥಳೀಯರಿಗೂ ಹೋಗಿದೆ. ಅದೆಲ್ಲದರ ಮಾಹಿತಿ ಕಲೆ ಹಾಕಲು ಆರೋಪಿಗಳನ್ನು 13 ದಿನದವರೆಗೆ ತಮ್ಮ ಕಸ್ಟಡಿಗೆ ಒಪ್ಪಿಸಬೇಕು ಎಂದು ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ರಾಮಲಿಂಗಪ್ಪ ಸಲ್ಲಿಸಿದ ಕೋರಿಕೆಗೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು 10 ದಿನದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಆ.14ಕ್ಕೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿದರು. ಅಂತೆಯೇ ಮತ್ತಿಬ್ಬರು ಆರೋಪಿಗಳಾದ ಅಮಾನತುಗೊಂಡಿರುವ ಪ್ರಾಧಿಕಾರದ ಆಯುಕ್ತ ಚಿದಾನಂದ, ಶೇಖರನನ್ನು ಆ.17ಕ್ಕೆ ಹಾಜರುಪಡಿಸಬೇಕು ಎಂದು ಆದೇಶಿಸಿದರು. ಪ್ರಕರಣದಲ್ಲಿ ಆರೋಪಿ ಕೆಬ್ಬಳ್ಳಿ ಆನಂದನ ಪರವಾಗಿ ವಕೀಲರಾದ ವಿಶಾಲ್ ರಘು ಮತ್ತು ಜಯರಾಮ್ ವಕಾಲತ್ತು ಸಲ್ಲಿಸಿದರೆ, ನಾಗಲಿಂಗಸ್ವಾಮಿ ಪರ ಶಿವಕುಮಾರ್ ವಾದಿಸಿದರು. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ಭವನಕ್ಕೆ ಕರೆದೊಯ್ದು, ಸಂಜೆಯಿಂದಲೇ ವಿಚಾರಣೆ ಪ್ರಾರಂಭಿಸಿದ್ದಾರೆ.
3 ಮಂದಿ ಹೆಸರು ಬಹಿರಂಗ
ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಂಚಿಸಿರುವ ರು.16.50 ಕೋಟಿ ಮೊತ್ತದ ಪೈಕಿ ತಲಾ ರು.25 ಲಕ್ಷ ಹಣ ಜವರಯ್ಯ, ಅಶೋಕ್, ಹರ್ಷ ಎಂಬುವರ ಹೆಸರಿಗೆ ವರ್ಗಾವಣೆ ಆಗಿದೆ ಎನ್ನುವ ಮಾಹಿತಿಯು ಪ್ರಕರಣದ ತನಿಖೆ ನಡೆಸುತ್ತಿರುವ ರಾಮನಗರ ಪೊಲೀಸರ ಮೂಲಗಳು ದೃಢಪಡಿಸಿವೆ. ಆರೋಪಿಗಳಾದ ಕೆಬ್ಬಳ್ಳಿ ಆನಂದ ಮತ್ತು ನಾಗಲಿಂಗಸ್ವಾಮಿಯಿಂದ ಸ್ಥಳೀಯವಾಗಿ ಕೆಲವರಿಗೆ ಹಣ ಹರಿದು ಹೋಗಿದೆ. ಅದರ ಮಾಹಿತಿ ಕಲೆ ಹಾಕಿ ತನಿಖೆ ನಡೆಸುವ ನಿಟ್ಟಿನಲ್ಲಿ ಅವರಿಬ್ಬರನ್ನೂ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದು, ಆರೋಪಿಗಳ ಜಾಲದೊಂದಿಗೆ ರಾಮನಗರದಲ್ಲೂ ಸಾಕಷ್ಟು ಮಂದಿ ಶಾಮೀಲಾಗಿರುವ ಅನುಮಾನಕ್ಕೆ ಪುಷ್ಟಿ ನೀಡಲಿದೆ.