ವಿಶ್ವಭಾರತಿ ಅಕ್ರಮ ಬಡಾವಣೆಗಳಿಗೆ ಬಿಬಿಎಂಪಿ ಸೌಲಭ್ಯ ಸ್ಥಗಿತ: ಮೇಯರ್
ಬೆಂಗಳೂರು: ಗಿರಿನಗರದ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಕ್ರಮ ಬಡಾವಣೆಗಳಿಗೆ ಬಿಬಿಎಂಪಿ ನಾಗರಿಕ ಸೌಲಭ್ಯ ಸ್ಥಗಿತಗೊಳಿಸಬೇಕಿದೆ ಎಂದು ಮೇಯರ್ ಡಿ.ವೆಂಕಟೇಶ್ಮೂರ್ತಿ ಹೇಳಿದ್ದಾರೆ.
ಸಂಘವು 150 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಬಹುತೇಕ ಬಡಾವಣೆಗಳು ಅಕ್ರಮವಾಗಿದ್ದು, ಇಲ್ಲಿನ ಪ್ರದೇಶಗಳಿಗೆ ಬಿಬಿಎಂಪಿ ಯಾವುದೇ ತೆರಿಗೆ ಇಲ್ಲದೆ ನೀರು, ಬೀದಿ ದೀಪ, ರಸ್ತೆ ಹಾಗೂ ಕಸ ನಿರ್ವಹಣೆಯಂಥ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ, ಕಾನೂನಿನಲ್ಲಿ ಅಕ್ರಮ ಬಡಾವಣೆಗಳಿಗೆ ಸೌಲಭ್ಯ ನೀಡುವಂತಿಲ್ಲ. ಆದ್ದರಿಂದ ಈ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಡಾವಣೆಯನ್ನು ಬಿಡಿಎದ ಟೌನ್ ಅಂಡ್ ಕಂಟ್ರಿ ಪ್ಲಾನ್ ಆ್ಯಕ್ಟ್ ಪ್ರಕಾರ ರೂಪಿಸಿಲ್ಲ. ಇನ್ನು ನಿವೇಶನಗಳ ಹಂಚಿಕೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಒಬ್ಬರಿಗೇ ಐದಾರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅನೇಕ ನಿವೇಶನದಾರರು ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಕೆಲವರು ಲೋಕಾಯುಕ್ತದಲ್ಲೂ ದೂರು ಸಲ್ಲಿಸಿದ್ದಾರೆ. ಕೆಲವರು ಅಕ್ರಮವಾಗಿ ಬಿಬಿಎಂಪಿ, ಜಲಮಂಡಳಿಯಿಂದ ಸೌಲಭ್ಯ ಪಡೆಯುತ್ತಿದ್ದು, ಉಳಿದವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಇದನ್ನು ಹೇಳಿಕೊಳ್ಳಲು ಇಲ್ಲಿನ ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘದವರು ನನ್ನ ಬಳಿ ಬಂದಿದ್ದರು. ಆದ್ದರಿಂದ ನಾನು ಅಧಿಕಾರಿಗಳು ಮತ್ತು ಮಾಧ್ಯಮಗಳ ಸಹಿತ ಸ್ಥಳ ಪರಿಶೀಲನೆ ನಡೆಸಿದೆ ಎಂದು ಮೇಯರ್ ಹೇಳಿದರು.