ಸಂಭ್ರಮದಿಂದ ನಡೆದ ನಂದಿಗಿರಿ ಪ್ರದಕ್ಷಿಣೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಆ.5
ಬೆಳಗಿನ ಚುಮುಚುಮು ಚಳಿ, ಬಾನಾಡಿಗಳಂತೆ ತೇಲುತ್ತಿದ್ದ ಬಿಳಿಮೋಡಗಳು ಕರಗಿ ತುಂತುರು ಹನಿ ಆಗ ತಾನೆ ಆರಂಭವಾಗಿತ್ತು. ಅದೇ ಸಮಯಕ್ಕೆ ನಂದಿ ಗ್ರಾಮದ ಭೋಗನಂದೀಶ್ವರ ದೇಗುಲದಲ್ಲಿ ಘಂಟಾನಾದ. ಅಪ್ಪಟ ಧಾರ್ಮಿಕತೆಯ ಬೆಸುಗೆ ಹೊಂದಿರುವ 75ನೇ ವರ್ಷದ ನಂದಿ ಗಿರಿ ಪ್ರದಕ್ಷಿಣೆಗೆ ಚಾಲನೆ ದೊರೆತಿತ್ತು.
ಆಗ ಸಮಯ ಬೆಳಗ್ಗೆ 6.30. ಆರಂಭದಲ್ಲಿ ನೂರಾರು ಜನ ಭಜನೆ ಮಾಡುತ್ತಾ ದೇವಾಲಯದಿಂದ ಹೊರಬಂದು ಪ್ರದಕ್ಷಿಣೆ ಹೊರಟರು.
ನಂತರ ಸಹಸ್ರಾರು ಮಂದಿ ಈ ಧಾರ್ಮಿಕ ಯಾತ್ರೆಯಲ್ಲಿ ತಾ ಮುಂದು, ನಾ ಮುಂದು ಎಂಬಂತೆ ಉತ್ಸಾಹದ ಭರದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ತಂಡೋಪತಂಡವಾಗಿ ಜನ ಬಂದು ಸೇರುತ್ತಿದ್ದರು. ಈ ಯಾತ್ರೆ ಕುಡುಮ ಕ್ರಾಸ್, ಅಂಗಟ್ಟ, ಕಾರಹಳ್ಳಿ, ಕಣಿವೆಪುರ, ನಂದಿ ಬೆಟ್ಟದ ಕ್ರಾಸ್ಗೆ ಬಂದಾಗ ಎಲ್ಲ ಭಕ್ತಾದಿಗಳಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಉಪಾಹಾರ ಸೇವಿಸಿ ಮುನ್ನಡೆದು ಹೆಗ್ಗಡಿಹಳ್ಳಿ, ಕಣಿವೆಪುರ, ಕಣಿವೆ ಬಸವಣ್ಣ, ಸುಲ್ತಾನ್ಪೇಟೆ ಮೂಲಕ ಮತ್ತೆ ಭೋಗನಂದೀಶ್ವರ ಸನ್ನಿಧಿಗೆ ಬಂದು ಸೇರಿದಾಗ ಮಧ್ಯಾಹ್ನದ ಬಿಸಿಲೇರಿತ್ತು. ಆ ವೇಳೆಗೆ ಜನ ಪಂಚಗಿರಿಗಳನ್ನು ದರ್ಶಿಸಿದ್ದರು. ಮತ್ತೆ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವ ಮೂಲಕ 75ನೇ ವರ್ಷದ ನಂದಿ ಗಿರಿ ಪ್ರದಕ್ಷಿಣಾ ಕಾರ್ಯಕ್ರಮಕ್ಕೆ ತೆರೆ ಬಿತ್ತು.
ಧಾರ್ಮಿಕತೆಯ ಬೆಸುಗೆಣ ಈ ಕಾರ್ಯಕ್ರಮ ಒಂದು ಪೌರಾಣಿಕ ಐತಿಹ್ಯ ಮತ್ತು ಧಾರ್ಮಿಕತೆಯ ಬೆಸುಗೆಯೊಂದಿಗೆ ಮಹತ್ವ ಎನಿಸಿದೆ. ನಂದಿ ಗಿರಿ ಸಾಕ್ಷಾತ್ ಶಿವ ವಾಸವಿರುವ ಪ್ರದೇಶ. ಈ ಬೆಟ್ಟವನ್ನು ಸುತ್ತಿದರೆ ಕೈಲಾಸವನ್ನು ಸುತ್ತಿದಷ್ಟೇ ಪುಣ್ಯಪ್ರಾಪ್ತಿಯಾಗುತ್ತದೆ. ಅಂದರೆ ಮುಕ್ತಿಗೆ ಮುರೇಗೇಣು ಎನ್ನುವ ಪುರಾಣಪ್ರಸಿದ್ಧ ನಂಬಿಕೆ ಇದೆ. ದೊಡ್ಡಬಳ್ಳಾಪುರ ನೇಕಾರ ಸಮುದಾಯ ಆಶಾಢದ ಅಮಾನಿ(ನೇಕಾರಿಕೆಗೆ ಬಿಡುವಿನ ಕಾಲ)ಯನ್ನು ಈ ಅರ್ಥಪೂರ್ಣ ಧಾರ್ಮಿಕ ಶ್ರದ್ಧೆ ಶ್ರದ್ಧೆ ಪಾಲಿಸಲು ಮೀಸಲಿಟ್ಟಿದ್ದಾರೆ. 1938ರಲ್ಲೇ ದೊಡ್ಡಬಳ್ಳಾಪುರದ ಜನ ಈ ಪ್ರದಕ್ಷಿಣೆ ಕಾರ್ಯಕ್ರಮವನ್ನು ಆರಂಭಿಸಿದ್ದರು.
ಬಿಡುವಿನ ಕಾಲವನ್ನು ನಿಸರ್ಗದ ಒಡನಾಟದಲ್ಲಿ ಕಳೆಯುವ ಅಪ್ಪಟ ಆರೋಗ್ಯಕರ ಚಿಂತನೆ ಇದರ ಹಿಂದಿದೆ. ಆಶಾಢ ಮಾಸದ ಕೊನೆಯ ಸೋಮವಾರ ತಂಡೋಪ ತಂಡ ಜನರು ಒಂದೆಡೆ ಕೂಡಿ ಬಯಲುಸೀಮೆಯ ಸಹ್ಯಾದ್ರಿ ಎನಿಸಿರುವ ಪಂಚಗಿರಿಗಳನ್ನು ಭಕ್ತಿಭಾವದಿಂದ ಪ್ರದಕ್ಷಿಣೆ ಹಾಕೋದೇ ಇದರ ವೈಭವ.
ದೊಡ್ಡಬಳ್ಳಾಪುರ ನಗರದ ದೇವಾಂಗ ಸಮುದಾಯದ ಹತ್ತಾರು ಭಜನಾ ಮಂದಿರಗಳ ಭಕ್ತಾದಿಗಳು ಸೇರಿದಂತೆ ಅನೇಕರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮಹಿಳೆಯರು ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದದ್ದು ಸಹಜವಾಗಿತ್ತು. ಆಹ್ಲಾದಕರ ವಾತಾವರಣದಲ್ಲಿ ಸುತ್ತಾಡುವುದು ಶುದ್ಧಗಾಳಿಯ ಸೇವನೆ ಮತ್ತು ಹಲವು ರೋಗರುಜಿನಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದು ಮಹತ್ವದ ವಿಚಾರ. ಹೀಗಾಗಿ ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಭಾಗವಹಿಸಿದ್ದರು.
ನಂದಿ ಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾ ಸಂಸ್ಥಾನದ ಶ್ರೀದಯಾನಂದಪುರಿ ಸ್ವಾಮೀಜಿ, ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಕೆ.ಓ.ನಾಗರಾಜ್, ಉಪಾಧ್ಯಕ್ಷ ಕೆ.ಎಸ್.ಸನಾತನಮೂತಿ, ಪ್ರ.ಕಾರ್ಯದರ್ಶಿ ಎ.ಎನ್.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ದಾಳಿ ಎಸ್.ಕೃಷ್ಣಕುಮಾರ್, ಖಜಾಂಚಿ ಬಿ.ಜಿ.ಶ್ರೀನಿವಾಸ್, ಸಂಚಾಲಕ ಸಿ.ಎಸ್.ಮಧುಸೂದನ್, ಎನ್.ಎಸ್.ಚಿಕ್ಕಣ್ಣ ಸೇರಿದಂತೆ 12 ಮಂದಿ ಟ್ರಸ್ಟಿಗಳು ನೇತೃತ್ವ ವಹಿಸಿದ್ದರು.