ಅಧಿಪತ್ಯಕ್ಕಾಗಿ ಬೊಂಬೆನಗರಿ ನಿರ್ಣಾಯಕ ಪಾತ್ರ
ಸು.ನಾ. ನಂದಕುಮಾರ್
ಚನ್ನಪಟ್ಟಣ: ಒಕ್ಕಲಿಗರ ಶಕ್ತಿ ಕೇಂದ್ರದ ಅಧಿಪತ್ಯಕ್ಕಾಗಿ ಎದುರಾಗಿರುವ ಲೋಕಸಭಾ ಉಪಚುನಾವಣೆಯಲ್ಲಿ ಮತ್ತೊಮ್ಮೆ ಬೊಂಬೆನಗರಿ ನಿರ್ಣಾಯಕ ಪಾತ್ರವಹಿಸಲಿದೆ.
2001ರಲ್ಲಿ ನಡೆದ ಕನಕಪುರ ಉಪಚುನಾವಣೆಯ ಸಮಯದಲ್ಲಿ ದೇವೇಗೌಡ ಮತ್ತು ಶಿವಕುಮಾರ್ ನಡುವಿನ ರಾಜಕೀಯ ಮೇಲಾಟಕ್ಕೆ ಮುನ್ನುಡಿ ಬರೆದಿದ್ದ ಬೊಂಬೆನಗರಿ ಈ ಬಾರಿ ಇಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಮಹತ್ವ ಪಡೆದಿದೆ.
ಯೋಗೇಶ್ವರ್ ಪಕ್ಷಾಂತರದ ಬಳಿಕ ತಾಲೂಕು ಕಾಂಗ್ರೆಸ್ ಕೋಮಾ ಸ್ಥಿತಿ ತಲುಪಿದೆ ಎಂಬ ಸಂದೇಶವನ್ನು ಮೂರು ಚುನಾವಣೆಗಳ ಫಲಿತಾಂಶ ಸಾರಿದೆ. ಮೂರು ಚುನಾವಣೆಗಳಲ್ಲಿ ಠೇವಣಿ ಕಳೆದು ಕೊಂಡಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಇಂತಹ ಎಡವಟ್ಟು ಮರುಕಳಿಸದಂತೆ ಎಚ್ಚರ ವಹಿಸಿದ್ದು ಈಕ್ಷೇತ್ರಕ್ಕೆ ಇನ್ನಿಲ್ಲದ ಮಹತ್ವ ನೀಡಿದೆ.
ಕಾಂಗ್ರೆಸ್ನ ಮತಗಳನ್ನು ದೋಚಿ ಸಮಾಜವಾದಿ ಪಕ್ಷದ ತಿಜೋರಿಯಲ್ಲಿರಿಸಿರುವ ಶಾಸಕ ಯೋಗೇಶ್ವರ್ ಪುಸಲಾಯಿಸಲು ಒಂದೆಡೆ ಕಾಂಗ್ರೆಸ್ನ ಅತಿರಥ ಮಹಾರಥ ನಾಯಕರೇ ಮುಂದಾಗಿದ್ದಾರೆ. ಇತ್ತ ಸಮಾಜವಾದಿ ಪಕ್ಷದ ಮತಗಳು ನಮ್ಮದೇ ಎಂದು ಹೇಳುತ್ತಾ ಯೋಗೇಶ್ವರ್ ಮತಬ್ಯಾಂಕ್ಗೆ ಲಗ್ಗೆ ಇರಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಹೆಚ್ಚಿನ ಮಹತ್ವ: ಶೋಚನೀಯ ಸ್ಥಿತಿಯಲ್ಲಿರುವ ತಾಲೂಕು ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಜೆಡಿಎಸ್ಗೆ ಸರಿಸಮಾನದ ಸ್ಪರ್ಧೆ ನೀಡಬೇಕಾದಲ್ಲಿ ಅದು ಸಮಾಜವಾದಿ ಪಕ್ಷದಲ್ಲಿರುವ ಕಾಂಗ್ರೆಸ್ ಮೂಲದ ಮತಗಳ ಅನಿವಾರ್ಯತೆಯನ್ನು ಅರಿತಿರುವ ಕಾಂಗ್ರೆಸ್ ಪಕ್ಷ ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ.
ಡಿಕೆಶಿ ಸಾರಥ್ಯ: ಡಿ.ಕೆ.ಶಿವಕುಮಾರ್ ಹೆಚ್ಚಿನ ಜವಾಬ್ದಾರಿ ವಹಿಸಿ ಕೊಳ್ಳಲಿದ್ದು ತಮಗಿರುವ ಹಳೆ ಪರಿಚಯದ ಮೇಲೆ ಮತಭೇಟೆಗೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿದ್ದ ಸಾತನೂರು ಕ್ಷೇತ್ರಕ್ಕೆ ವಿರೂಪಾಕ್ಷಿಪುರ ಹೋಬಳಿಯ ಕೆಲ ಗ್ರಾಮಗಳು ಸೇರುತ್ತಿದ್ದು ಈ ಭಾಗದಲ್ಲಿ ಅವರಿಗಿರುವ ಹಳೆಯ ರಾಜಕೀಯ ಒಡನಾಟ ಮತ್ತೆ ಬಳಸಿ ಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ.
ಜೆಡಿಎಸ್ ಕಾರ್ಯತಂತ್ರ: ಈಗಾಗಲೇ ಈ ಕ್ಷೇತ್ರದಲ್ಲಿ ತನ್ನ ಕುಟುಂಬದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೈಸುಟ್ಟು ಕೊಂಡಿರುವ ಜೆಡಿಎಸ್ ಮುಖಂಡರು ಈಬಾರಿ ಹಿಂದಿನ ಕಹಿ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದು ಬೊಂಬೆನಗರದ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದಾರೆ.
ಈಗಾಗಲೇ ತಾಲೂಕು ಜೆಡಿಎಸ್ ಮುಖಂಡರೊಂದಿಗೆ ಎರಡು ಸುತ್ತು ಮಾತುಕತೆ ನಡೆಸಿರುವ ಜೆಡಿಎಸ್ ವರಿಷ್ಠರು ಈ ಚುನಾವಣೆ ದೇವೇಗೌಡರ ಕುಟುಂಬದ ಆತ್ಮಗೌರವದ ಪ್ರಶ್ನೆ ಎಂದು ಮುಖಂಡರನ್ನು ಹುರಿದುಂಬಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಈ ಕ್ಷೇತ್ರದಲ್ಲಿ ನಿರೀಕ್ಷಿತ ಮತ ದಕ್ಕಂತೆ ನೋಡಿಕೊಳ್ಳಲು ಮುಖಂಡರಿಗೆ ತಾಕೀತು ಮಾಡಿದ್ದು ಬೊಂಬೆನಗರಿಯ ಮತಗಳಿಗೆ ಜೆಡಿಎಸ್ ಹೆಚ್ಚಿನ ಮಹತ್ವ ನೀಡಿದೆ.
ಸೈಲೆಂಟಾಗಿರುವ ಸೈನಿಕ
ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಯಾರನ್ನು ಬೆಂಬಲಿಸಲಿದೆ ಎಂದು ಇದುವರೆಗೆ ಗುಟ್ಟು ಬಿಟ್ಟುಕೊಡದ ಯೋಗೇಶ್ವರ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಕಾಯ್ದು ಕೂಡುವಂತೆ ಮಾಡಿದ್ದಾರೆ. ಆ.15ರ ವರೆಗೆ ಏನನ್ನೂ ಮಾತನಾಡ ಬೇಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದು, ಕೊನೆಕ್ಷಣದಲ್ಲಿ ತನ್ನ ನಡೆ ಬಹಿರಂಗ ಪಡಿಸುವ ಚಿಂತನೆ ನಡೆಸಿದ್ದು ಯೋಗೇಶ್ವರ್ ನಡೆ ಚುನಾವಣಾ ಕಣದಲ್ಲಿ ಸಾಕಷ್ಟು ಮಹತ್ವ ಪಡೆದಿದೆ.