ಅಪೌಷ್ಟಿಕತೆ ನಿವಾರಣೆಗೆ ಕ್ಷೀರ ಭಾಗ್ಯ ಯೋಜನೆ ಸಹಕಾರಿ
ಕ.ಪ್ರ.ವಾರ್ತೆ ಸೂಲಿಬೆಲೆ ಆ.6
ಗ್ರಾಮೀಣ ಭಾಗದಲ್ಲಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಜಾರಿಗೆ ತಂದಿರುವ ಕ್ಷೀರ ಭಾಗ್ಯ ಯೋಜನೆ ಬಹಳ ಸಹಕಾರಿಯಾಗಿದೆ.ಶಿಕ್ಷಕರು ಇದನ್ನು ಸಮರ್ಥವಾಗಿ ಮಕ್ಕಳಿಗೆ ಸಿಗುವಂತೆ ಎಚ್ಚರಿಕೆ ವಹಿಸಬೇಕು ಎಂದು ತಾಪಂ ಮಾಜಿ ಸದಸ್ಯ ಚನ್ನಪ್ಪ ಹೇಳಿದ್ದಾರೆ.
ಸೂಲಿಬೆಲೆ ಪಟ್ಟಣದ ಕುರುಬರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಜನಪರವಾಗಿರುವ ಯೋಜನೆಗಳನ್ನು ತರುವ ಮೂಲಕ ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಲಕ್ಷಾಂತರ ಮಕ್ಕಳು ದೈಹಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ. ಪೂರೈಕೆಯಾಗುವ ಹಾಲನ್ನು ಸಂರಕ್ಷಣೆ ಮಾಡಿ ಉತ್ತಮವಾಗಿ ಮಕ್ಕಳಿಗೆ ಸಿಗುವಂತೆ ಶಿಕ್ಷಕರು ಎಚ್ಚರ ವಹಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಹೋಬಳಿ ಘಟಕ ಉಪಾಧ್ಯಕ್ಷ ಮರುವೆ ಕೃಷ್ಣಪ್ಪ ಮಾತನಾಡಿ, ಜನಪರವಾದ ಯೋಜನೆಗಳು ಕಾಂಗ್ರೆಸ್ ಸರ್ಕಾರದಿಂದ ಜಾರಿಯಾಗುತ್ತಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳು ಅಗತ್ಯವಾಗಿವೆ. ಪ್ರಗತಿಪರವಾದ ಯೋಜನೆಗಳನ್ನು ಸಿದ್ದರಾಮಯ್ಯ ಸರ್ಕಾರದಿಂದ ನಿರೀಕ್ಷೆ ಮಾಡಬಹುದು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿರಾಜ್ (ಕೋಡಿ) ಮಾತನಾಡಿ, ರಾಜ್ಯದಲ್ಲಿ ಪ್ರಗತಿಪರವಾದ ಯೋಜನೆಗಳಲ್ಲಿ ಕ್ಷೀರ ಭಾಗ್ಯ ಯೋಜನೆ ಬಹು ಉಪಯುಕ್ತವಾಗಿದೆ. ಗ್ರಾಮೀಣ ಭಾಗದಲ್ಲಿರುವ ಶಾಲೆಗಳ ಮಕ್ಕಳು ಕ್ಷೀರ ಭಾಗ್ಯ ಯೋಜನೆಯಿಂದ ಪ್ರಗತಿ ಕಾಣಲು ಸಾಧ್ಯ ಎಂದರು.ಇದೇ ಯುವ ಮುಖಂಡ ಪೈಂಟರ್ ರಮೇಶ್ ಶಾಲೆ ಎಲ್ಲ ಮಕ್ಕಳಿಗೆ ಹಾಲು ಕುಡಿಯಲು ಅಗತ್ಯವಾಗಿರುವ ಲೋಟಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡಿದರು.
ಮುಖ್ಯ ಶಿಕ್ಷಕಿ ಲೀಲಾವತಿ, ಕ್ಲಸ್ಟರ್ ಸಂಪನ್ಮೂಲಾಧಿಕಾರಿ ಮುತ್ತುರಾಜ್, ಮುಖಂಡ ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.