ಉಪಚುನಾವಣೆಗೆ ಎಚ್ಡಿಕೆಯೇ ಕಾರಣ
ಕ.ಪ್ರ.ವಾರ್ತ್ಣೆ ಮಾಗಡ್ಣಿ ಆ.6
ಜೆಡಿಎಸ್ ನಾಯಕರದೇನಿದ್ದರೂ ಅವಕಾಶವಾದಿಗಳು ಜತೆಗೆ ಅಧಿಕಾರದಾಹಿಗಳು, ಉಪಚುನಾವಣೆ ನಡೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ ಕಾರಣ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.
ಅವರು ಮಾಗಡಿ ಪಟ್ಟಣದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಉಪ ಚುನಾವಣೆಯ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಮಧುಗಿರಿ ಕ್ಷೇತ್ರದಿಂದ ಗೆದ್ದಿದ್ದ ಅನಿತಾ ಕುಮಾರಸ್ವಾಮಿ ಕ್ಷೇತ್ರದ ಜನತೆಯನ್ನು ಮರೆತರು. ಚನ್ನಪಟ್ಟಣದಿಂದ ಸ್ಪರ್ಧಿಸಿ ಪರಾಭವಗೊಂಡರು, ಸಂಸದರಾಗಿದ್ದ ಕುಮಾರಸ್ವಾಮಿ ಸಿ.ಎಂ, ಕನಸು ಕಾಣುತ್ತಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಧಾನ ಸಭೆಗೆ ಆಯ್ಕೆಯಾದರೂ ಸಿ.ಎಂ. ಕನಸು ಈಡೇರಲಿಲ್ಲ. ಆದರೂ ಈಗ ಲೋಕಸಭಾ ಉಪಚುನಾವಣೆಗೆ ಪತ್ನಿ ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಬಿಜೆಪಿಯೊಂದಿಗೆ ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ. ಇತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ ಎಂದು ಹೇಳಿಕೆ ನೀಡುತ್ತಾರೆ. ಮತ್ತೊಂದೆಡೆ ಅನಿತಾ ಕುಮಾರಸ್ವಾಮಿ ಒಳಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ. ಅಪ್ಪ, ಮಗ, ಸೊಸೆ ಭಿನ್ನ ಹೇಳಿಕೆಯಿಂದಾಗಿ ಯಾರನ್ನು ನಂಬುವುದು ಎಂಬ ಪಶ್ನೆ ಮತದಾರರನ್ನು ಕಾಡುತ್ತಿದೆ. ಎಂ.ಎಲ್.ಸಿ ಸ್ಥಾನಕ್ಕೆ ಜೆಡಿಎಸ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ, ಸಂಸದ ಸ್ಥಾನಕ್ಕೆ ಬಿಜೆಪಿಯೊಂದಿಗೆ ಮೈತ್ರಿ, ಹೀಗೆ ರಾಜಕೀಯ ಕುತಂತ್ರವನ್ನು ಕುಮಾರಸ್ವಾಮಿ ನಡೆಸಿದ್ದಾರೆ ಎಂದು ಟೀಕಿಸಿದರು. ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಒಬ್ಬ ಸಮರ್ಥ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುರೇಶ್ ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸಾಮಾನ್ಯ ಕಾರ್ಯಕರ್ತ: ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ ಡಿ.ಕೆ. ಸುರೇಶ್ ಒಬ್ಬ ಸಾಮಾನ್ಯ ಕಾರ್ಯಕರ್ತ, ಅವರ ಶ್ರಮ, ತ್ಯಾಗ ಮನೋಭಾವವನ್ನು ಕಾಂಗ್ರೆಸ್ ಗುರುತಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಟಿಕೆಟ್ ನೀಡಿದೆ. ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಲು ಮಾಜಿ ಸಂಸದೆ, ತೇಜಸ್ವಿನಿ, ಕೆಜಿಪಿ ನಾಯಕ ಜೆಡ್ರಳ್ಳಿ ಕೃಷ್ಣಮೂರ್ತಿ ಸೇರಿದಂತೆ ಪಕ್ಷಾತೀತವಾಗಿ ನಾಯಕರು ಮುಂದೆ ಬಂದಿದ್ದಾರೆ. ಡಿ.ಕೆ. ಸುರೇಶ್ ಡಿ.ಕೆ. ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ಜನಸೇವೆ ಮಾಡಿಕೊಂಡು ಬಂದಿದ್ದಾರೆ. ಶುದ್ಧ ಕುಡಿಯುವ ನೀರು ಕೊಟ್ಟಿದ್ದಾರೆ. ನಿಮ್ಮ ಮನೆಯ ಮಗನಿದ್ದಂತೆ, ನಿಮ್ಮ ಮಗನ ಗೆಲವಿಗೆ ನಿಮ್ಮೆಲ್ಲರ ಮತ ನೀಡಿ ಆಶೀರ್ವದಿಸುವಂತೆ ಕರೆ ನೀಡಿದರು.
ಅಧಿಕ ಮತದಿಂದ ಗೆಲ್ಲಿಸಿ: ಕೆಪಿಸಿಸಿ ಸದಸ್ಯ ಎ.ಮಂಜು ಪ್ರಾಸ್ತಾವಿಕವಾಗಿ ಮಾತನಾಡಿ 1 ಲಕ್ಷ ಅಧಿಕ ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಅಭ್ಯರ್ಥಿ ಡಿ.ಕೆ. ಸುರೇಶ್ ಮಾತನಾಡಿ ಪಕ್ಷ ನೀಡುವ ಜವಾಬ್ದಾರಿಯನ್ನು ಹೊತ್ತಿದ್ದೇನೆ. ನಾನು ನಿಮ್ಮ ಸೇವಕ ತಮಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಮಾಜಿ ಶಾಸಕ ಸಿ. ಎಂ. ಲಿಂಗಪ್ಪ, ಎಸ್. ರವಿ, ಯುವ ಕಾಂಗ್ರೆಸ್ ರಾಜ್ಯಧ್ಯಕ್ಷ ರಿಜ್ವಾನ್ ಹರ್ಷದ್, ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಇದೇ ಸಂದರ್ಭದಲ್ಲಿ ಕೆಜೆಪಿ ಮುಖಂಡ ಜೆಡ್ರಳ್ಳಿ ಕೃಷ್ಣಮೂರ್ತಿ, ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಪುರಸಭೆ ಸದಸ್ಯ ಎನ್.ಗಂಗಣ್ಣ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಕೆಎಂಎಫ್ ನಿರ್ದೇಶಕ ಪಿ. ನಾಗರಾಜು, ಬಿಬಿಎಂಪಿ ಮಾಜಿ ಉಪ ಮೇಯರ್ ಪುಟ್ಟರಾಜು, ಹನುಮಂತರಾಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಪಿ.ವಿ. ಸೀತಾರಾಂ, ಭೋಗೇಶ್, ಕಲ್ಪನಾ ಶಿವಣ್ಣ, ಕಮಲಮ್ಮ, ಯೋಗಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಬಿ.ವಿ. ಜಯರಾಮು, ಗಿರಿಯಣ್ಣ, ಎಂ.ಎನ್.ಮಂಜುನಾಥ್, ಕೆ.ವಿ.ಬಾಲು, ಜಯರಾಮು, ಬೆಳಗವಾಡಿ ರಂಗನಾಥ್, ಸುಹೇಲ್, ಬಿ.ಎಸ್. ಕುಮಾರ್, ಯತಿರಾಜ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಗೌಡರ ತಂತ್ರ ಈಗ ನಡೆಯಲ್ಲ
ಎಚ್.ಡಿ.ದೇವೇಗೌಡರ ತಂತ್ರಗಾರಿಕೆ ಈಗ ನಡೆಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ನೀರು ಹರಿಸಲು ಹಣ ಮಂಜೂರಾತಿ ನೀಡಿದ್ದಾರೆ. ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಡಿ.ಕೆ.ಸುರೇಶ್ ಅವರನ್ನು ಎಲ್ಲರು ಒಗ್ಗೂಡಿ ಗೆಲ್ಲಿಸೋಣ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.