ನಿಷ್ಠೆಯಿಂದ ಸೇವೆ ಸಲ್ಲಿಸಿ: ಸಿಬ್ಬಂದಿಗೆ ಇಒ ಮನವಿ
ಹೊಸಕೋಟೆ: ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಪರ್ಕ ಇಟ್ಟುಕೊಂಡಿರುವ ಹಾಗೂ ಸಾಮಾಜಿಕ ಉಪಯುಕ್ತ ಕಾರ್ಯಗಳನ್ನು ನೆರವೇರಿಸಬೇಕಾದ ಪಿಡಿಒಗಳು, ಕಾರ್ಯದರ್ಶಿಗಳು ಪ್ರಾಮಾಣಿಕತೆ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಇಒ ಕೃಷ್ಣಪ್ಪ ಲೋಹಾರ ಹೇಳಿದರು. ಅವರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಪ್ರಚೋದನೆ, ಆಮಿಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಸೇವೆ ಸಲ್ಲಿಸುವ ಮೂಲಕ ತಮ್ಮ ಕರ್ತವ್ಯ ದಕ್ಷತೆಯಿಂದ ಸಾರ್ವಜನಿಕರ ವಿಶ್ವಾಸ ಗಳಿಸಿಕೊಳ್ಳಬೇಕು. ಸರಕಾರದ ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ಪ್ರಮುಖ ಯೋಜನೆಗಳು, ಆಶ್ರಯದಂತಹ ನಿವೇಶನಗಳ ಹಂಚಿಕೆ ಫಲಾನುಭವಿಗಳಿಗೆ ದೊರಕಿಸಿಕೊಡಲು ಶ್ರಮಿಸಬೇಕು ಎಂದರು. ತಮ್ಮ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಸಹಕಾರ ನೀಡಿದ ಸಿಬ್ಬಂದಿಯನ್ನು ಅಭಿನಂದಿಸಿದರು. ಬಿಇಒ ವಿ.ಸಿ. ಬಸವರಾಜೇಗೌಡ ಸಹ ಮಾತನಾಡಿದರು. ಇಒ ಕೃಷ್ಣಪ್ಪ ಲೋಹಾರ ದೇವನ ಹಳ್ಳಿಗೆ ವರ್ಗಾವಣೆಗೊಂಡಿದ್ದು ದೊಡ್ಡಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಎಂ. ದ್ಯಾಮಪ್ಪ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ಗಾವಣೆ ಗೊಂಡಿರುವ ಪಂಚಾಯಿತಿ ಕಾರ್ಯದರ್ಶಿಗಳಾದ ಮಂಜುನಾಥ್, ದಿನೇಶ್ ಅವರನ್ನು ಸಹ ಸನ್ಮಾನಿಸಲಾಯಿತು.
ಇಂದು ಗ್ರಾಹಕರ ಸಂವಾದ ಸಭೆ
ರಾಮನಗರ: ಬೆಸ್ಕಾಂನಿಂದ ಆ.7ರ ಮಧ್ಯಾಹ್ನ 3ಕ್ಕೆ ರಾಮನಗರ ನಗರ ಉಪ ವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಗ್ರಾಹಕರು ಕುಂದು ಕೊರತೆಗಳ ಬಗ್ಗೆ ಈ ಸಭೆಯಲ್ಲಿ ದೂರು ಸಲ್ಲಿಸಬಹದು ಎಂದು ನಗರ ಉಪ ವಿಭಾಗದ ಎಇಇ ತಿಳಿಸಿದ್ದಾರೆ.
ಪ್ರದ್ಯುಮನ್ ಸಿಂಗ್ ರಾವತ್ ನೇಮಕ
ಬೆಂಗಳೂರು: ಪ್ರದ್ಯುಮನ್ ಸಿಂಗ್ ರಾವತ್ ಅವರು ಕೆನರಾ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಬ್ಯಾಂಕ್ ಕ್ಷೇತ್ರದಲ್ಲಿ 34 ವರ್ಷದ ಅನುಭವವುಳ್ಳ ಅಧಿಕಾರಿಯಾಗಿದ್ದು, 1956ರಲ್ಲಿ ಜನಿಸಿದ ಇವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1979ರಂದು ಬ್ಯಾಂಕ್ ಉದ್ಯಮಿಯಾಗಿ ಸೇವೆ ಪ್ರಾರಂಭಿಸಿದರು.