ಪತಿಯೇ ಪತ್ನಿ ಕತ್ತು ಕೊಯ್ದು ಬರ್ಬರ ಹತ್ಯೆ
ಕ.ಪ್ರ.ವಾರ್ತ್ಣೆ ರಾಮನಗರ ಆ.6
ಆಸ್ತಿ ವಿಚಾರವಾಗಿ ಪತಿ ಪತ್ನಿಯ ನಡುವೆ ಉಂಟಾದ ಕಲಹ ವಿಕೋಪಕ್ಕೆ ತಿರುಗಿ, ಪತಿಯೇ ತನ್ನ ಪತ್ನಿಯ ಕತ್ತು ಕೊಯ್ದು ಬರ್ಬರ ಹತ್ಯೆಗೈದಿರುವ ಘಟನೆ ನಗರದ ಗಾಂಧಿನಗರ ಬಡಾವಣೆಯಲ್ಲಿ ಮಂಗಳವಾರ ನಡದಿದೆ.
ಮೂಲತಃ ಬೆಂಗಳೂರಿನ ಕೆಂಗೇರಿ ಮೂಲದ ಲತಾ (30) ಕೊಲೆಯಾದ ದುರ್ದೈವಿ. ಈಕೆಯನ್ನು 2005ರಲ್ಲಿ ಗಾಂಧಿನಗರದ ಲೋಕೇಶ್ ಅಲಿಯಾಸ್ ಲಕ್ಷ್ಮೀಜವರಯ್ಯ ಎಂಬುವರಿಗೆ ವಿವಾಹ ಮಾಡಲಾಗಿತ್ತು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಈ ನಡುವೆ ತನ್ನ ಅತ್ತೆಯ ಹೆಸರಿನಲ್ಲಿದ್ದ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಂತೆ ಪತ್ನಿ ಮೇಲೆ ಒತ್ತಡ ಹೇರುತ್ತಿದ್ದನು.
ಮಂಗಳವಾರ ಮಧ್ಯಾಹ್ನ 12ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಸ್ತಿ ವಿಚಾರವಾಗಿ ಲೋಕೇಶ್ ಜಗಳ ಆರಂಭಿಸಿದ್ದಾನೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ರೊಚ್ಚಿಗೆದ್ದು ಚಾಕುವಿನಿಂದ ಲತಾಳ ಕತ್ತು ಕೊಯ್ದು ಪರಾರಿಯಾಗಿದ್ದಾನೆ.
ಲತಾ ಅವರ ಮೊಬೈಲ್ಗೆ ಕೆಂಗೇರಿಯಲ್ಲಿರುವ ಆಕೆಯ ತಾಯಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದರಿಂದ ಗಾಬರಿಗೊಂಡು ಬಂದು ನೋಡಿದಾಗ ಲತಾ ಕೊಲೆಯಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.