ಯುವತಿ ಮೇಲೆ ಅತ್ಯಾಚಾರ?
ಆನೇಕಲ್ಲು: ಮನೆಯಿಂದ ನೀರು ತರಲು ಹೊರ ಬಂದ ಯುವತಿಯ ಮೇಲೆ ಯುವಕನೊಬ್ಬ ಹಲ್ಲೆ ಮಾಡಿ ಕರೆದೊಯ್ದ, ಮತ್ತೆ ತಂದು ಬಿಟ್ಟ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಬಾದ್ರಿಪುರದಲ್ಲಿ ನಡೆದಿದೆ. ಯುವತಿಯ ಮೇಲೆ ಅತ್ಯಾಚಾರ ನಡೆದಿರಬಹುದು ಎಂದು ಶಂಕಿಸಲಾಗಿದೆ. 16 ವರ್ಷದ ಕಮಲ(ಹೆಸರು ಬದಲಿಸಲಾಗಿದೆ) ಹಲ್ಲೆಗೊಳಗಾದ ಯುವತಿ. ಸೋಮವಾರ ಮಧ್ಯಾಹ್ನ ನೀರು ತರಲು ಮನೆಯಿಂದ ಕಮಲ ಹೊರ ಬಂದಾಗ ನೆರೆ ಮನೆಯ ಮಹೇಶ(22) ಎಂಬ ಯುವಕ ಹಿಂಬಾಲಿಸಿದ. ಸ್ವಲ್ಪ ದೂರ ಬಂದ ಮೇಲೆ ತಲೆಗೆ ಹೊಡೆದಿದ್ದಾನೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನನ್ನನ್ನು ಎಲ್ಲಿಗೆ ಕರೆದೊಯ್ದನೋ ಗೊತ್ತಿಲ್ಲ. ತಡ ರಾತ್ರಿ ನನ್ನ ಮನೆಯ ಬಳಿ ಬಿಟ್ಟು ಹೋದ. ನನಗೆ ಪೂರ್ಣವಾಗಿ ಪ್ರಜ್ಞೆ ಬಂದ ಮೇಲೆ ತಂದೆ ತಾಯಿಯವರಿಗೆ ತಿಳಿಸಿದೆ. ನಂತರ ನನ್ನನ್ನು ಖಾಸಗಿ ನರ್ಸಿಂಗ್ ಹೋಂನಲ್ಲಿ ದಾಖಲು ಮಾಡಿದರು ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಆನೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ತಿಳಿಯಲಿದೆ. ಅಲ್ಲದೆ, ಆರೋಪಿ ಮಹೇಶ್ನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.