ರಂಜಾನ್ ಕೋಮು ಸೌಹಾರ್ದತೆ ಕಾಪಾಡಲು ಮುಖಂಡರಿಗೆ ಕರೆ
ಕ.ಪ್ರ.ವಾರ್ತೆ ಸೂಲಿಬೆಲೆ ಆ.6
ರಂಜಾನ್ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಯಾವುದೇ ಗಲಭೆ, ಗಲಾಟೆಗಳಿಗೆ ಆಸ್ಪದ ಕೊಡದೇ ಕೋಮು ಸೌಹಾರ್ದತೆ ಕಾಪಾಡುವಂತೆ ಪಿಎಸ್ಐ ರಾಜಣ್ಣ ಕರೆ ನೀಡಿದ್ದಾರೆ.
ಸೂಲಿಬೆಲೆ ಪಟ್ಟಣ ನಾನಾ ಮುಖಂಡರೊಂದಿಗೆ ಮಂಗಳವಾರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸೂಲಿಬೆಲೆ ಪಟ್ಟಣದ ಶಾಂತಿ ಸುವ್ಯವಸ್ಥೆಗೆ ಉತ್ತಮ ಹೆಸರು ಹೊಂದಿದೆ. ಎಲ್ಲ ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿರುವ ಇಲ್ಲಿ ಹಬ್ಬದ ದಿನಗಳಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು. ಶಾಂತಿಯನ್ನು ಕದಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸಣ್ಣಪುಟ್ಟ ಘಟನೆಗಳಾದರೇ ಸಮುದಾಯದ ಹಿರಿಯ ಮುಖಂಡರೇ ಬಗೆಹರಿಸಿಕೊಳ್ಳುವಂತಾಗಬೇಕು. ಶಾಂತಿ ಸುವ್ಯವಸ್ಥೆಗೆ ಪ್ರಥಮ ಆದ್ಯತೆಯಾಗಿದ್ದು, ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ತಿಳಿ ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ನಾನಾ ಸಮುದಾಯದ ಮುಖಂಡರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದರು. ತಾಪಂ ಮಾಜಿ ಸದಸ್ಯ ಚನ್ನಪ್ಪ, ಹಿರಿಯ ಮುಖಂಡ ಮರುವೆ ಕೃಷ್ಣಪ್ಪ, ರಮೇಶ, ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ, ಗ್ರಾಪಂ ಸದಸ್ಯರಾದ ಮೌಲಖಾನ್, ಇಲ್ಲೂ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.