'ಆರ್ಥಿಕ ಬದಲಾವಣೆಗೆ ಮಾಹಿತಿ ತರಬೇತಿ ಅಗತ್ಯ'
ಕ.ಪ್ರವಾರ್ತೆ ಸೂಲಿಬೆಲೆ ಆ.7
ಮಹಿಳೆಯರ ರಕ್ಷಣೆಯೊಂದಿಗೆ ಅವರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣಿಗೆ ಕಾರಣವಾಗುವಂತ ತರಬೇತಿಗಳನ್ನು ಗ್ರಾಮೀಣ ಭಾಗದಲ್ಲಿರುವವರಿಗೆ ನೀಡುವ ಅಗತ್ಯವಿದೆ. ತರಬೇತಿಯಲ್ಲಿ ಸಿಗುವ ಮಾಹಿತಿಯನ್ನು ಸಮರ್ಥವಾಗಿ ಬಳಿಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ ಹೇಳಿದ್ದಾರೆ.
ಸೂಲಿಬೆಲೆ ಗ್ರಾಪಂ ಕಚೇರಿ ಆವರಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿದ್ಯಾರಣ್ಯ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 11 ರಿಂದ 18 ವರ್ಷದ ಕಿಶೋರಿಯರಿಗೆ ಸಬಲ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಪದವಿ ಕಾಲೇಜು ಅಭಿವೃದ್ಧಿ ಸದಸ್ಯ ಪ್ರಶಾಂತ್ ಮಾತನಾಡಿ, ಸರ್ಕಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಬೆಳೆಯುತ್ತಿರುವ ಹೆಣ್ಣು ಮಕ್ಕಳಿಗೆ ತರಬೇತಿ ಆಯೋಜಿಸಿ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳ ಮೇಲ್ವಚಾರಕಿ ವಿನೋದ ಮಾತನಾಡಿ, ಸರ್ಕಾರ ನೀಡುವ ಇಂಥ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಎಂದರು.