ಕ್ಷುಲ್ಲಕ ಕಾರಣಕ್ಕೆ ಜಗಳ ಕೊಲೆಯಲ್ಲಿ ಅಂತ್ಯ
ರಾಮನಗರ: ಸ್ನೇಹಿತರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಒಬ್ಬನ ಕೊಲೆಯಲ್ಲಿ ಪರ್ಯವಸಾನಗೊಂಡಿರುವ ಘಟನೆ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಕನಕಪುರದ ಮಾಡಿಕೊಪ್ಪ ಗ್ರಾಮದ ಆನಂದ್(35) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ಅಣ್ಣಪ್ಪ ಕೊಲೆ ಆರೋಪಿ. ಇವರಿಬ್ಬರು ಕೂಲಿ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಕೂಲಿ ಕೆಲಸ ಮುಗಿದ ನಂತರ ಊಟ ಮಾಡುವ ವೇಳೆ ಜಗಳ ಆರಂಭವಾಗಿದೆ.
ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಮರಳವಾಡಿ-ಸಿದ್ದಿದೇವರಹಳ್ಳಿ ರಸ್ತೆಯ ವೆಂಕಟಸ್ವಾಮಿ ರೆಡ್ಡಿ ಎಂಬುವರ ತೋಟದ ಬಳಿ ಅಣ್ಣಪ್ಪ ಆನಂದ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೊಲೀಸರು ಆರೋಪಿ ಅಣ್ಣಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.