ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್, ಬಿಜೆಪಿ ಮರು ಮೈತ್ರಿಗೆ ನಾಂದಿ

Rashmi Kasaragodu
Updated On : 8 Aug 2013, 12:53 pm

ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ   ರಾಮನಗರ   ಆ. 7
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯ ಜಿದ್ದಾಜಿದ್ದಿನ ಕಣವು ಜೆಡಿಎಸ್ ಮತ್ತು ಬಿಜೆಪಿ ಮರು ಮೈತ್ರಿಗೆ ನಾಂದಿ ಹಾಡಿದೆ. ಮೈತ್ರಿ ಸಾಧ್ಯತೆ ಅಲ್ಲಗಳೆಯುತ್ತಲೇ ಬಂದ ಉಭಯ ಪಕ್ಷಗಳ ನಾಯಕರು ಈಗ ಬಹಿರಂಗ ಹಸ್ತಲಾಘವಕ್ಕೆ ಸಜ್ಜಾಗಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿದ್ದೇ ರಾಮನಗರದ ನೆಲದಲ್ಲಿ. ಈಗ ಅದೇ ರಾಮನಗರ ಕೇಂದ್ರ ಸ್ಥಾನವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೇ ಆ ಪಕ್ಷಗಳ ನಡುವಿನ ಮರು ಮೈತ್ರಿಗೆ ವೇದಿಕೆ ಕಲ್ಪಿಸಿದೆ.
ಲೋಕಸಭೆಗೆ ಮರು ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಮಂಡ್ಯಕ್ಕಿಂತಲೂ ಬೆಂಗಳೂರು ಗ್ರಾಮಾಂತರವೇ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿ ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಹುರಿಯಾಳು.
ಒಕ್ಕಲಿಗರ ಭದ್ರಕೋಟೆಯಲ್ಲಿ ಅಧಿಪತ್ಯ ಸ್ಥಾಪನೆಗಾಗಿ ಸಮುದಾಯದ ಇಬ್ಬರು ದಿಗ್ಗಜರ ಕುಟುಂಬಗಳ ನಡುವೆ ಸೆಣೆಸಾಟ ನಡೆಯುತ್ತಿದೆ. ಗೆಲವೊಂದನ್ನೇ ಗುರಿಯಾಗಿಟ್ಟುಕೊಂಡ ಉಭಯ ಪಕ್ಷಗಳು ಇನ್ನಿಲ್ಲದ ಕಸರತ್ತಿಗೆ ಇಳಿದಿವೆ. ಈಗ ಜೆಡಿಎಸ್ ನಾಯಕರಿಗೆ ಮಡಿವಂತಿಕೆಗಿಂತ ಪ್ರತಿಷ್ಠೆಯೇ ಮುಖ್ಯ. ಹೀಗಾಗಿಯೇ ಬಿಜೆಪಿಯ ಬೆಂಬಲ ಪಡೆಯುತ್ತಿದ್ದಾರೆ.
ಕಾಂಗ್ರೆಸ್ ಟಾರ್ಗೆಟ್: ಮರು ಚುನಾವಣೆ ಕದನದಲ್ಲಿ ಕಾಂಗ್ರೆಸ್ ಸೋಲಿಸುವುದೇ ಜೆಡಿಎಸ್ ಗುರಿ. ಅಂತೆಯೇ ಬಿಜೆಪಿ ಟಾರ್ಗೆಟ್ ಕೂಡ ಕಾಂಗ್ರೆಸ್ ಪಕ್ಷವೇ ಆಗಿದೆ. ಕಾಂಗ್ರೆಸ್ಸೇತರ ಮತಗಳು ಹಂಚಿಕೆಯಾಗದಂತೆ ನೋಡಿಕೊಳ್ಳಲು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಿದೆ. ಜೆಡಿಎಸ್ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಗೋಜಿಗೆ ಹೋಗಿಯೇ ಇಲ್ಲ.
ಬಿಜೆಪಿಗೆ ಮಂಡ್ಯ ಕ್ಷೇತ್ರದಲ್ಲಿ ನೆಲೆಯಿಲ್ಲ. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಬಲಾಢ್ಯವಾಗಿದೆ. ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲಾಗದಿದ್ದರೂ ಫಲಿತಾಂಶವನ್ನು ಬದಲಿಸುವ ಶಕ್ತಿಯಂತೂ ಆ ಪಕ್ಷಕ್ಕೆ ಇದ್ದೇ ಇದೆ.
ಇಲ್ಲೂ ರಂಗ ರಚನೆ: ರಾಜ್ಯದಲ್ಲಿ ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಜೆಡಿಎಸ್, ಬಿಜೆಪಿ ಕೂಟಕ್ಕೆ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳೂ ಕೂಡಿಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇದಕ್ಕೆ, ವಿಧಾನಸಭೆ ಅಧಿವೇಶನದಲ್ಲಿ ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಪುಷ್ಠಿ ನೀಡುವಂತಿದೆ.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಇಳಿಸಿಲ್ಲ. ಈ ಕ್ಷೇತ್ರಗಳಲ್ಲಿ ಕೆಜೆಪಿಗೆ ತನ್ನದೇ ಆದ ಜಾತಿ ಆಧಾರಿತ ಮತಗಳಿವೆ. ಪ್ರಸಕ್ತ ಮರು ಚುನಾವಣೆಯಲ್ಲಿ ಜೆಡಿಎಸ್‌ಗೆ ಕೆಜೆಪಿಯಿಂದಲೂ ಬೆಂಬಲ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಬಹಿರಂಗವಾದ ನಿಲುವು::  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚನ್ನಪಟ್ಟಣವನ್ನು ಪ್ರತಿನಿಧಿಸುತ್ತಿರುವ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಪಿ.ಯೋಗೇಶ್ವರ್ ನಿಲುವಿನ್ನೂ ನಿಗೂಢವಾಗಿಯೇ ಇದೆ. ಇಬ್ಬರು ಸಮಾನ ಶತ್ರುಗಳ ಪೈಕಿ ಯಾರನ್ನು ಬೆಂಬಲಿಸಬೇಕು ಎನ್ನುವ ಆಲೋಚನೆಯಲ್ಲಿರುವ ಅವರಿಗೆ ಹೈಕಮಾಂಡ್ ಆದೇಶ ಪಾಲನೆಯೂ ಮುಖ್ಯವಾಗಿದೆ.
ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಯೋಗೇಶ್ವರ್ ಅವರು ದೇವೇಗೌಡ ಕುಟುಂಬದ ವಿರುದ್ಧ ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಅವರ ಪ್ರತಿ ಹೆಜ್ಜೆಗೂ ಡಿ.ಕೆ.ಶಿವಕುಮಾರ್ ಅಡ್ಡಗಾಲಾಗಿದ್ದಾರೆ. ಹೀಗಾಗಿ ಯೋಗೇಶ್ವರ್ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ. ಅವರ ನಿಲುವು ಪ್ರಕಟಕ್ಕೆ ಮುನ್ನವೇ ಕೆಲ ಹಿಂಬಾಲಕರು ಕಾಂಗ್ರೆಸ್‌ಗೆ ಜಿಗಿಯಲಾರಂಭಿಸಿದ್ದಾರೆ.


ಬದಲಾಯ್ತು ನಿಲುವು
ಲೋಕಸಭೆ ಮರು ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮ್ಯಾಚ್ ಫಿಕ್ಸಿಂಗ್ ವದಂತಿ ಹಬ್ಬಿತ್ತು. ಆದರೆ, ಬಿಜೆಪಿ ನಾಯಕರು ಯು ಟರ್ನ್ ತೆಗೆದುಕೊಂಡಿದ್ದಾರೆ.  ಕಣದಲ್ಲಿದ್ದುಕೊಂಡು ಬೆಂಬಲಿಸುವ ಬದಲು ತನ್ನ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್ ತೆಗೆಸಿದ್ದಾರೆ. ಹೀಗಾಗಿ ಉಭಯ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಂತೆಯೇ.


ವಿವಾದ ಹುಟ್ಟು ಹಾಕಿದ ಜೆಕೆ
ಕೊಲೆ ಪ್ರಕರಣವೊಂದರಲ್ಲಿ ನನಗೆ ಜೈಲು ಪಾಲಾಗಬೇಕಾದ ಸ್ಥಿತಿ ಎದುರಾಗಿತ್ತು. ಆಗ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಂದ ಕಡತಕ್ಕೆ ಸಹಿ ಹಾಕಿಸಿ ಡಿ.ಕೆ.ಶಿವಕುಮಾರ್ ನನ್ನನ್ನು ಪಾರು ಮಾಡಿದ್ದರು.  ಈಗ ಧರ್ಮ ಪಾಲಿಸುವುದಕ್ಕಾಗಿ ನಾನು ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಕೆಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ವೇಳೆ ಜೇಡ್ರಳ್ಳಿ ಕೃಷ್ಣಪ್ಪ (ಎಚ್.ಎಂ. ಕೃಷ್ಣಮೂರ್ತಿ) ಬಹಿರಂಗ ಹೇಳಿಕೆಯೊಂದಿಗೆ ವಿವಾದ ಹುಟ್ಟು ಹಾಕಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement