ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತರಬೇತಿದಾರರಿಗೆ ಸಂಸ್ಥೆಯಲ್ಲೇ ಉದ್ಯೋಗಾವಕಾಶ

Rashmi Kasaragodu
Updated On : 8 Aug 2013, 12:54 pm

ಕ.ಪ್ರ.ವಾರ್ತೆ   ರಾಮನಗರ   ಆ. 7
ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ಪರಿಣಿತಿಯೊಂದಿಗೆ ತರಬೇತಿ ಪೂರ್ಣಗೊಳಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಸಂಸ್ಥೆಯಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ನಾಕಗಾವ ಹೇಳಿದರು.
ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ)ಯಲ್ಲಿ ಬುಧವಾರ ನಡೆದ 4ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿಯೊಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ತರಬೇತಿ ನೀಡಲಾಗುತ್ತಿದೆ ಎಂದರು.
ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಉತ್ಪಾದನಾ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಹಿಂದೆ ತೇರ್ಗಡೆಯಾದ 3 ಬ್ಯಾಚುಗಳ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶ ಕಲ್ಪಿಸಿದ್ದು, ಈ ತಂಡಕ್ಕೂ ನೀಡಲಾಗುತ್ತದೆ ಎಂದು ತಿಳಿಸಿದರು.
ತರಬೇತಿ ಹೊಂದಿದವರು ವಾಹನ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದಷ್ಟೇ ಅಲ್ಲದೆ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹಿರೋಷಿ ನಾಕಗಾವ ಆಶಿಸಿದರು.
ಇಚ್ಚಾಶಕ್ತಿ ಅತಿ ಮುಖ್ಯ: ಪದವಿ ಪ್ರದಾನ ಮಾಡಿ ಮಾತನಾಡಿದ ಗೀತಾಂಜಲಿ ಕಿರ್ಲೋಸ್ಕರ್, ಹೆಣ್ಣಿಗೆ ಮಗು ಜನಿಸಿದಾಗ ಆಗುವಷ್ಟೇ ಸಂತಸ ಆ ಮಗು ಬೆಳೆದು, ಪದವಿ ಪಡೆಯುವಾಗಲೂ ಆಗುತ್ತದೆ. ಪ್ರತಿಯೊಬ್ಬರೂ ಜ್ಞಾನ, ಕೌಶಲ್ಯವನ್ನು ವೃದ್ಧಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ತಾಂತ್ರಿಕ ಕೌಶಲ್ಯವು ಉತ್ತಮ ವೃತ್ತಿಪರತೆಯನ್ನು ರೂಪಿಸುತ್ತದೆ. ಆದರೆ, ತಂಡದೊಂದಿಗೆ ಸೌಹಾರ್ದತೆಯಿಂದ ಮಾಡುವ ಕೆಲಸವು ನಾಯಕತ್ವವನ್ನು ರೂಪಿಸುತ್ತದೆ. ಗೆಲ್ಲುವ ಛಲದೊಂದಿಗೆ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಇದೆ ಎಂದರು.
ಕೈಗಾರಿಕೆ ಸೇರಿದಂತೆ ಔದ್ಯೋಗಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ ಬಹುದೊಡ್ಡ ಸವಾಲು ನಮ್ಮೆದುರು ಇದೆ. ಅದನ್ನು ಸಮರ್ಥವಾಗಿ ಎದುರಿಸಬೇಕಿದೆ. ವಿದ್ಯಾರ್ಥಿಗಳು ಇಂಗ್ಲೀಷ್ ಸಂವಹನಕ್ಕೆ ಹೆಚ್ಚು ಒತ್ತು ನೀಡುವುದು ಒಳಿತು ಎಂದು ತಿಳಿಸಿದರು.  
ಘಟಿಕೋತ್ಸವ ಸಮಾರಂಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್, ಜುಂಕೋ ನಾಕಗಾವ, ಐಐಟಿಐ ಪ್ರಾಂಶುಪಾಲರಾದ ಕಲ್ಪನಾ, ಮಸಫೂಸಾ ಕುಮಿಟೊ, ಜೈಶಂಕರ್, ಯು.ಜಿ.ಹಿರೋಕಿ ಮತ್ತಿತರರು ಭಾಗವಹಿಸಿದ್ದರು. ತರಬೇತಿ ಪೂರ್ಣಗೊಳಿಸಿದ 64 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement