ನಿಧಿ ಆಸೆಗಾಗಿ ದೇಗುಲ ಧ್ವಂಸ
ಕ.ಪ್ರ. ವಾರ್ತ್ಣೆ ಆನೇಕಲ್ಲು ಆ.7
ನಿಧಿಯ ಆಸೆಗಾಗಿ ಪುರಾತನ ದೇಗುಲವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು ಪೊಲೀಸರ ಅತಿಥಿಗಳಾದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಇಂಡ್ಲವಾಡಿ ಗ್ರಾಮದ ಎಲ್ಲೆಯಲ್ಲಿ ನಡೆದಿದೆ.
ಇಂಡ್ಲವಾಡಿ ಹೊರವಲಯದ ನೀಲಗಿರಿ ತೋಪಿನಲ್ಲಿ ಪಟಾಲಮ್ಮ ದೇವತೆಯ ಪುರಾತನ ಕಲ್ಲು ಮಂಟಪದಡಿ ವಿಗ್ರಹವಿದ್ದಿತು. ಅಮಾವಾಸ್ಯೆಯ ದಿನ ತಮಿಳುನಾಡಿನ ಕೆಲವರು ಸ್ಥಳೀಯರ ಸಹಕಾರದಿಂದ ತೋಪಿನಲ್ಲಿ ಪೂಜೆ ಮಾಡುತ್ತಿದ್ದರು. ಸ್ಥಳದಲ್ಲಿ ಅರಿಷಿನ ಕುಂಕುಮ ಹಾಗೂ ನಿಂಬೆಹಣ್ಣುಗಳನ್ನು ಪೂಜೆ ಮಾಡಿರುವುದು ಕಂಡ ಗ್ರಾಮಸ್ಥರು ಅನುಮಾನದಿಂದ ದಾಳಿ ಮಾಡಿದಾಗ 7 ಜನರನ್ನು ಹೊರತುಪಡಿಸಿ ಎಲ್ಲರೂ ತಪ್ಪಿಸಿಕೊಂಡರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇವರ ಪೈಕಿ ಮಹಿಳೆಯೊಬ್ಬಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಟಾಟಾ ಸುಮೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಅಮಾವಾಸ್ಯೆಯ ದಿನ ಬಲಿ ನೀಡಿ ಭೂಮಿ ಅಗೆದರೆ ನಿಧಿ ಸಿಗುವುದೆಂಬ ಮೂಢನಂಬಿಕೆಯಿಂದಾಗಿ ಪುರಾತನ ದೇಗುಲಗಳು ನಾಶವಾಗುತ್ತಿವೆ. ದೇಗುಲಗಳಿಗೆ ಹೆಚ್ಚಿನ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.