ರಸ್ತೆ ಅಪಘಾತದಲ್ಲಿ ಅಧಿಕಾರಿಗೆ ಗಾಯ
ಕ.ಪ್ರ.ವಾರ್ತೆ ಕನಕಪುರ ಆ. 7
ಕನಕಪುರ ತಾಲೂಕು ಹೊನ್ನಿಗನಹಳ್ಳಿ ಸಮೀಪ ನಡೆದ ರಸ್ತೆ ಅಪಘಾತವೊಂದರಲ್ಲಿ ಬೆಂಗಳೂರಿನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಪಳನಿಸ್ವಾಮಿ ತಮ್ಮ ವಾಹನದಲ್ಲಿ ಹೊನ್ನಿಗನಹಳ್ಳಿ ಶನಿಮಹಾತ್ಮ ದೇವಾಲಯದ ಬಳಿ ಆಗಮಿಸುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಕಾರಣ ಪಳನಿಸ್ವಾಮಿ ಗಾಯಗೊಂಡಿದ್ದಾರೆ. ಇವರೊಂದಿಗೆ ಪಯಣಿಸುತ್ತಿದ್ದ ಟಿಎಂಸಿ ಕಾಲೊನಿಯ ವೇಣು ಎಂಬಾತನೂ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕನಕಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.