ರೈತರಿಗೆ ತೊಂದರೆಯಾದರೆ ಕೆಎಂಎಫ್ ಸಹಾಯ ಹಸ್ತ'
ನೆಲಮಂಗಲ: ಹೈನುಗಾರಿಕೆಯು ಹಳ್ಳಿ ಭಾಗದ ಜನರಿಗೆ ಆದಾಯದ ಪ್ರಮುಖ ಮೂಲವಾಗಿದೆ. ಅಂತಹ ಕಾರ್ಯಧಲ್ಲಿ ರಾಸುಗಳ ಅಕಾಲಿಕ ಮರಣದಿಂದ ರೈತರಿಗೆ ತೊಂದರೆ ಉಂಟಾಗುತ್ತದೆ. ಇದರಿಂದಾಗುವ ನಷ್ಟವನ್ನು ಬರಿಸಲು ಕೆ.ಎಂ.ಎಫ್ ಸಿದ್ಧವಿದೆ ಎಂದು ಕೆ.ಎಂ.ಎಫ್ ಮಂಡಳಿಯ ನಿರ್ದೇಶಕ ತಿಮ್ಮರಾಜು ತಿಳಿಸಿದರು. ಅವರು ಬುಧವಾರ ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಮಣ್ಣೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅಕಾಲಿಕ ಮರಣವನ್ನಪ್ಪಿದ ರಾಸುಗಳ ಪಾಲಕರಿಗೆ ಕೆ.ಎಮ್.ಎಫ್ ಇಲಾಖೆಯ ಅಧಿಕಾರಿಗಳು ಚೆಕ್ ಮೂಲಕ ಸಹಾಯ ಧನವನ್ನು ವಿತರಿಸಿ ಮಾತನಾಡುತ್ತಾ ಸಹಕಾರ ಸಂಘದಲ್ಲಿ ರೈತರಿಗೆ ಅನುಕೂಲವಾಗುವಂತೆ ಕಡಿಮೆ ಬೆಲೆಯಲ್ಲಿ ಪಶು ಆಹಾರ ನೀಡಲಾಗುತ್ತಿದೆ. ರೈತರು ಇದರ ಅನುಕೂಲವನ್ನು ಪಡೆದುಕೊಳ್ಳಬೇಕೆಂದರು. ನಾಗಮ್ಮ ಮತ್ತು ನೀಲಾಂಬಿಕೆ ಅವರಿಗೆ ತಲಾ 10 ಸಾವಿರ ಮೌಲ್ಯದ ಚೆಕ್ ವಿತರಿಸಿದರು.