ಶಿವಲಿಂಗದ ಪೀಠ ಅಗೆದು ನಿಧಿ ದೋಚಿದ ಕಳ್ಳರು
ನೆಲಮಂಗಲ: ಭೀಮನ ಅಮಾವಾಸ್ಯೆಯ ರಾತ್ರಿ ಬೆಣ್ಣಗೆರೆ ಗ್ರಾಮದಲ್ಲಿ ಪುರಾತನ ಕಾಲದ ಶಿವಲಿಂಗದ ಪೀಠವನ್ನು ಅಗೆದು ಅದರ ಕೆಳಗೆ ಇದ್ದ ನಿಧಿಯನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ದಾಬಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಣ್ಣಗೆರೆ ಗ್ರಾಮದಲ್ಲಿ ನಡೆದಿದೆ.
ಶಿವಲಿಂಗದ ಸುತ್ತಲೂ 2 ಅಡಿ ಅಗಲ ಮತ್ತು 10 ಅಡಿ ಆಳದಿಂದ ಮಣ್ಣನ್ನು ತೆಗೆದು ಹೊರ ಹಾಕಿದ್ದಾರೆ. 10 ಅಡಿ ತಳ ಭಾಗದಲ್ಲಿ ಸುಮಾರು 3 ಅಡಿ ಉದ್ದದ ಯಾವುದೋ ವಸ್ತು ಇರುವ ಕುರುಹು ಕಂಡು ಬರುತ್ತಿದೆ ಎಂದು ಗ್ರಾಮಸ್ಥರು ಸ್ಥಳವನ್ನು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯ ಕಂಡು ಬಂದಿದೆ.
ಈ ಸ್ಥಳದಲ್ಲಿ ನಡೆಸಿರುವ ಪೂಜಾ ಕಾರ್ಯ ಮತ್ತು ಶಿವಲಿಂಗದಿಂದ 15 ಅಡಿ ದೂರದಲ್ಲಿ ಸರ್ಪವು ಕಂಡು ಬಂದಿರುವ ಕುರುಹು ಮತ್ತು ಸರ್ಪಕ್ಕೆ ದಿಗ್ಬಂಧನ ಮಾಡಿ ಅಲ್ಲಿನ ನಿಧಿಯನ್ನು ಕೊಂಡೊಯ್ಯಲು ದುಷ್ಕರ್ಮಿಗಳು 15 ಮೀಟರ್ ಸುತ್ತಲೂ ಮಂತ್ರದ ದಾರ ಎಳೆದು ಎಲ್ಲಾ ದಿಕ್ಕಿಗೂ ನಿಂಬೆಹಣ್ಣು ಹಾಕಿ ಹೋಳಿಗೆ ಎಡೆ ಇಟ್ಟು ಪೂಜಿಸಿ ನಂತರ ಲಿಂಗವನ್ನು ಕಿತ್ತು ಅದರಡಿಯಿದ್ದ ನಿಧಿಯನ್ನು ದೋಚಿದ್ದಾರೆ.