ಸಾಲ ಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿ ಸಾಧ್ಯ: ವೆಂಕಟೇಶ್
ಶಿಡ್ಲಘಟ್ಟ: ಪಟ್ಟಣದ ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಗೌಡ ಅನಿರೀಕ್ಷಿತವಾಗಿ ಭೇಟಿ ನೀಡಿ ಬ್ಯಾಂಕಿನ ಅಂಕಿಅಂಶ ಪರಿಶೀಲಿಸಿದರು.ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ವಿದ್ಯುತ್, ನೀರು ಮತ್ತು ಸಾಲ ಸೌಲಭ್ಯ. ರೈತರು ಸಾಲ ಮನ್ನಾದ ವಿಷಯ ಬಿಟ್ಟು ಸಾಲ ಮರುಪಾವತಿ ಮಾಡಿದ್ದಲ್ಲಿ ಬ್ಯಾಂಕ್ ಉಳಿಯುತ್ತದೆ. ಬೇರೆ ರೈತರಿಗೆ ಸಾಲವೂ ಸಿಗುತ್ತದೆ ಎಂದು ತಿಳಿಸಿದರು. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಗ್ರಾಮಗಳಿಗೆ ಪ್ರವಾಸ ಹಾಕಿಕೊಂಡು ಜನರ ಮನವೊಲಿಸಿ ಸಾಲ ಮರು ಪಾವತಿಗೆ ಪ್ರಯತ್ನಿಸಬೇಕು. ಹಣ ಠೇವಣಿ ಇಡುವಂತೆ ಮನವೊಲಿಸಬೇಕು. ಕನಿಷ್ಠ ಪಕ್ಷ 50 ಲಕ್ಷವರೆಗಾದರೂ ಠೇವಣಿ ಸಂಗ್ರಹಿಸಬೇಕು. ಠೇವಣಿಯಿಂದ ಬಂದ ಹಣದಿಂದ ಬ್ಯಾಂಕು ರೈತರಿಗೆ ಸಾಲ ಕೊಟ್ಟು ಲಾಭ ಗಳಿಸಬೇಕೆಂದು ಸೂಚನೆ ನೀಡಿದರು. ಪ್ರಸಕ್ತ ವರ್ಷದಲ್ಲಿ ಶಿಡ್ಲಘಟ್ಟದ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮರುಸಾಲ ಪಾವತಿ ತುಂಬ ಕಡಿಮೆ ಇದ್ದು ಆದಷ್ಟು ಶೇ.80ರಷ್ಟು ಸಾಲ ಮರುಪಾವತಿಯಾಗುವಂತೆ ಮಾಡಬೇಕೆಂದರು. ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಗೋಪಾಲ್, ನಿರ್ದೇಶಕರಾದ ನಾಗಪ್ಪ, ಬಂಕ್ ಮುನಿಯಪ್ಪ, ಅಶ್ವತ್ಥನಾರಾಯಣ ರೆಡ್ಡಿ, ಜಯದೇವ, ವೆಂಕಟರಮಣಪ್ಪ, ಮುನಿಯಪ್ಪ ಹಾಜರಿದ್ದರು.
ಸ್ಥಳೀಯ ಆಡಳಿತದ ಬಗ್ಗೆ ನಿರ್ಲಕ್ಷ್ಯ: ಮನವಿ
ದೊಡ್ಡಬಳ್ಳಾಪುರ: ಸ್ಥಳೀಯ ಆಡಳಿತದ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರಾಜ್ಯ ವುಮನ್ ಮುನಿಸಿಪಲ್ ಕೌನ್ಸಿಲರ್ಸ್ ಬಳಗ ಆರೋಪಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಳಗದ ದೊಡ್ಡಬಳ್ಳಾಪುರ ನಗರಸಭೆ ಮಾಜಿ ಸದಸ್ಯೆ ಪ್ರಮೀಳಾ ಮಹದೇವ್, 2013ರ ಮಾರ್ಚ್ ತಿಂಗಳಲ್ಲಿ ಸಮಯಾಧಾರಿತವಾಗಿ ಮುನಿಸಿಪಾಲಿಟಿಗಳ ಚುನಾವಣೆ ನಡೆದಿದೆ. ಆದರೆ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಇರುವಿಕೆ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಕೂಡಲೇ ಚುನಾಯಿತ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಪ್ರಮಾಣ ವಚನ ನಡೆಯಬೇಕು. ನಗರಸಭೆ-ಪುರಸಭೆ-ಪಟ್ಟಣಪಂಚಾಯಿತಿಗಳಿಗೆ ಕೂಡಲೇ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಬೇಕು. ಮುನಿಸಿಪಾಲಿಟಿ ಸಮಿತಿಗಳು ರಚನೆಯಾಗಬೇಕು ಮತ್ತು ಸ್ಥಾಯಿ ಸಮಿತಿಗಳ ರಚನೆ ನಡೆಯಬೇಕು ಎಂಬ 4 ಮಹತ್ವದ ಬೇಡಿಕೆಗಳನ್ನು ಮುಂದಿಡಲಾಗಿದೆ. ಸರ್ಕಾರದ ಈ ನಿರ್ಲಕ್ಷ್ಯ ಸಂವಿಧಾನದ 74ನೇ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅವರು, ನಗರ ಸ್ಥಳೀಯ ಸರ್ಕಾರಗಳ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯಲ್ಲೇ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಪೌರಾಡಳಿತ ಸಚಿವ ಖಮರುಲ್‌ಇಸ್ಲಾಂ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮತ್ತಿತರರಿಗ ಮನವಿ ಸಲ್ಲಿಸಲಾಗಿದೆ. ಬಳಗದಲ್ಲಿ ಮಾಗಡಿಯ ಕಲ್ಪನಾ ಶಿವಣ್ಣ, ಲತಾಜತ್ತಿ, ಅಕ್ಕಮ್ಮ ಜಾನಾಲ್, ರೂಪಾ ಮುಳಬಾಗಿಲು, ಕವಿತಾ ಜಾಲಿಹಾಳ, ಪ್ರಮೀಳಾ ಮಹದೇವ್, ದೇವಿಕಾ ಸಿದ್ಧಲಿಂಗೇಗೌಡ ತುಮಕೂರು, ಚಂದ್ರಮ್ಮ ಮಧುಗಿರಿ, ಪುಷ್ಪಾವತಿ ಮೈಸೂರು, ಎನ್.ಪುಷ್ಪಾ ಮುಳಬಾಗಿಲು, ಆರ್.ಲಕ್ಷ್ಮೀದೇವಮ್ಮ ಸೇರಿದಂತೆ 11 ಮಂದಿ ಸಹಿ ಮಾಡಿದ್ದಾರೆ.
ವಿದ್ಯಾರ್ಥಿನಿ ಸಾವು
ಹಾಸನ: ತಾಲೂಕಿನ ಗೊರೂರುನಲ್ಲಿರುವ ಹೇಮಾವತಿ ಜಲಾಶಯದ ಕ್ರಸ್ಟ್ ಗೇಟ್‌ಗಳಿಂದ ಧುಮ್ಮಿಕ್ಕಿ ಹರಿಯುವ ನೀರಿನ ಸೌಂದರ್ಯ ವೀಕ್ಷಿಸಲು ಹೋಗಿದ್ದ ಹಾಸನ ನಗರದ ಕಾಲೇಜಿನ ವಿದ್ಯಾರ್ಥಿನಿ ನದಿಗೆ ಜಾರಿಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಬುಧವಾರ ನಡೆದಿದೆ. ಶ್ರೀನಗರ ಬಡಾವಣೆ ನಿವಾಸಿ ಸಬೀನಾ ಸಾವನ್ನಪ್ಪಿದ ವಿದ್ಯಾರ್ಥಿನಿ.