ದೇಶದ ರಾಜಕಾರಣ ಬದಲಾವಣೆ ಪರ್ವ ಶುರು
ಕ.ಪ್ರ.ವಾರ್ತೆ ಚನ್ನಪಟ್ಟಣ ಆ.8
ಮುಲಾಯಂ ಸಿಂಗ್ ಯಾದವ್ ನಾಯಕತ್ವದ ಸಮಾಜವಾದಿ ಪಕ್ಷ ಸಹಿತ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಕಾಂಗ್ರೆಸ್ ಸೋಲಿಗೆ ಪಣತೊಟ್ಟಿವೆ. ದೇಶದ ರಾಜಕಾರಣ ಬದಲಾವಣೆಯ ಪರ್ವ ಈ ಮರು ಚುನಾವಣೆಯಿಂದಲೇ ಆರಂಭ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಎಲ್ಎನ್ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಾಕಷ್ಟು ಅವಾಂತರ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು
ಕಿತ್ತೊಗೆಯಲೇಬೇಕಿದೆ. ಅದಕ್ಕೆ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳೇ ಮೆಟ್ಟಿಲಾಗಬೇಕು ಎಂದರು.
ಉಪ ಚುನಾವಣೆಗೆ ಸಂಬಂಧಿಸಿದಂತೆ ನಾನು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಜತೆ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ಮುಲಾಯಂ ಸಿಂಗ್ ಯಾದವ್ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು.
ತೆಲಗು ದೇಶಂನ ಚಂದ್ರಬಾಬು ನಾಯ್ಡು, ಓರಿಸಾದ ಪಟ್ನಾಯಕ್, ತಮಿಳುನಾಡಿನ ಕರುಣಾನಿಧಿ ಸೇರಿದಂತೆ ಸಮಾನ ಮನಸ್ಕ ಪಕ್ಷಗಳ ಮುಖಂಡರು ಭ್ರಷ್ಟ ಆಡಳಿತ ನೀಡುತ್ತಿರುವ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಶೀಘ್ರವೇ ತೃತೀಯ ರಂಗ ರಚನೆಯ ಪ್ರಕ್ರಿಯೆಯೂ ಪ್ರಾರಂಭವಾಗಲಿದೆ ಎಂದರು.
ಭದ್ರಕೋಟೆ ಉಳಿಸಿಕೊಳ್ಳಿ : ಲೋಕಸಭಾ ಉಪಚುನಾವಣೆ ಎದುರಾಗಿರುವ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳು ಜೆಡಿಎಸ್ ಭದ್ರಕೋಟೆ. ಇವನ್ನು ಉಳಿಸಿಕೊಳ್ಳಲು ಕಾರ್ಯಕರ್ತರು ಸಜ್ಜಾಗಬೇಕು. ಗ್ರಾಮಾಂತರದಲ್ಲಿ ಸ್ವತಃ ನಾನೇ ವಾಸ್ತವ್ಯ ಹೂಡಿ, ಪ್ರತಿಯೊಂದು ಪಂಚಾಯಿತಿ ಮಟ್ಟಕ್ಕೆ ಹೋಗಿ ಕಾರ್ಯಕರ್ತರನ್ನು ಸಂಘಟಿಸಿ, ಮೌಲ್ಯಯುತ ಚುನಾವಣೆ ನಡೆಸುತ್ತೇನೆ. ಈ ದೇವೇಗೌಡನನ್ನು ಉಳಿಸಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಸಂಗತಿ ಎಂದು ಅವರು ಭಾವುಕರಾಗಿ ಹೇಳಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಪೂರ್ಣ ಹದಗೆಟ್ಟಿದೆ ಎಂಬುದು ನನಗೆ ಗೊತ್ತು. ಇಲ್ಲಿನ ಕಾರ್ಯಕರ್ತರ ಮನೋಭಿಲಾಷೆಯನ್ನೂ ಅರಿತಿದ್ದೇನೆ. ಯಾರನ್ನೂ ನೆಚ್ಚಿಕೊಳ್ಳದೆ ನೇರವಾಗಿ ನಾನು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟಿಸುತ್ತೇನೆ ಎಂದು ದೇವೇಗೌಡ ತಿಳಿಸಿದರು.
ಹಣವೇ ಪ್ರಧಾನ: ಈ ಬಾರಿಯ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಮುಖಂಡರು ಹಣ ಚೆಲ್ಲುತ್ತಿದ್ದಾರೆ. ಲಕ್ಷಾಂತರ ರು. ಕೊಟ್ಟು ಅನ್ಯಪಕ್ಷದ ಮುಖಂಡರನ್ನು ಖರೀದಿಸುತ್ತಿದ್ದಾರೆ. ಹಣವೇ ಮುಖ್ಯವಾಗಿರುವ ಚುನಾವಣೆ ನಮಗೆ ಬೇಕಿರಲಿಲ್ಲ. ಆದರೆ, ಅನಿವಾರ್ಯ ಕಾರಣಕ್ಕೆ ಸ್ಪರ್ಧೆ ಒಡ್ಡಿದ್ದೇವೆ ಎಂದರು.
ಪಕ್ಷ ಉಳಿಸಲು ಅನಿತಾ ಸ್ಪರ್ಧೆ: ಈ ಬಾರಿಯ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಕಣಕ್ಕಿಳಿಸಲು ನಮ್ಮ ಕುಟುಂಬಕ್ಕೆ ಇಷ್ಟವಿರಲಿಲ್ಲ. ಆದರೆ, ಪಕ್ಷ ಉಳಿಸಲು ಅನಿತಾಕುಮಾರಸ್ವಾಮಿ ಅಗತ್ಯ ಎಂದು ಕಾರ್ಯಕರ್ತರು ಒತ್ತಡ ಹೇರಿದ ಪರಿಣಾಮವಾಗಿ ಅನಿವಾರ್ಯವಾಗಿ ಕಣಕ್ಕಿಳಿಸಬೇಕಾಯಿತು ಎಂದರು.
ಈ ಚುನಾವಣೆಗೆ ಸ್ಪರ್ಧಿಸಲು ಅನಿತಾಕುಮಾರಸ್ವಾಮಿಗೆ ಸ್ವತಃ ಇಷ್ಟವಿರಲಿಲ್ಲ. ಆದರೆ, ಸಂಕಷ್ಟ ಸ್ಥಿತಿಯಲ್ಲಿ ಪಕ್ಷ ಉಳಿಸಲು ಅವರನ್ನು ಬಲವಂತವಾಗಿ ಕಣಕ್ಕಿಳಿಸ ಬೇಕಾಯಿತು. ನಮ್ಮ ಪಕ್ಷ ಜಾತ್ಯತೀತ ಪಕ್ಷವಾಗಿದ್ದು, ಯಾವುದೇ ಕಾರಣಕ್ಕೂ ಒಂದು ಜಾತಿಗೆ ಮೀಸಲಾದ ಆಡಳಿತ ನೀಡಿಲ್ಲ. ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಾಗಿದೆ ಎಂದು ತಿಳಿಸಿದರು.
ಉಪ ಚುನಾವಣೆಗೆ ಸಂಬಂಧಿಸಿದಂತೆ ನಾನು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಜತೆ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ಮುಲಾಯಂ ಸಿಂಗ್ ಯಾದವ್ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ
ಟಿ ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಮುಖಂಡರನ್ನು ಕೆಳಗಿಳಿಸಿದರು
ಜೆಡಿಎಸ್ ಕಾರ್ಯಕರ್ತರ ಸಭೆಯ ವೇದಿಕೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರನ್ನು ಕೂರಿಸಿರುವ ಬಗ್ಗೆ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಪರಿಣಾಮ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ತಾಲೂಕು ಅಧ್ಯಕ್ಷರು, ಜಿ.ಪಂ., ತಾ.ಪಂ. ಸದಸ್ಯರು ಹಾಗೂ ಸ್ಥಳೀಯ ಮುಖಂಡರು ವೇದಿಕೆಯಲ್ಲಿದ್ದರು. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಮೊದಲ ಸಾಲಿನ ಮುಖಂಡರೇ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕರ್ತರು ಗದ್ದಲವೆಬ್ಬಿಸಿ ಮುಖಂಡರನ್ನು ವೇದಿಕೆಯಿಂದ ಕೆಳಗಿಳಿಸುವಲ್ಲಿ ಸಫಲರಾದರು.
ಚರ್ಚೆಗೆ ಗ್ರಾಸವಾದ ಐಬಿ ಭೇಟಿ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬಹಿರ್ದೆಸೆಗೆಂದು ಚನ್ನಪಟ್ಟಣದ ಪ್ರವಾಸಿ ಮಂದಿರಕ್ಕೆ ತೆರಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.
ಚುನಾವಣಾ ನೀತಿ ಸಂಹಿತೆ ಇರುವಾಗ ಯಾವುದೇ ರಾಜಕೀಯ ಮುಖಂಡರಿಗೆ ಪ್ರವಾಸಿ ಮಂದಿರ ನೀಡಬಾರದು. ಆದರೆ, ದೇವೇಗೌಡರಿಗೆ ನೀಡಿದ್ದು ಯಾಕೆ ಎಂಬುದು ವಿಪಕ್ಷದ ಮುಖಂಡರ ಪ್ರಶ್ನೆಯಾಗಿದೆ. ಕೆಲ ದಿನಗಳ ಹಿಂದೆ ತಾಲೂಕಿಗೆ ಆಗಮಿಸಿದ್ದ ದೇವೇಗೌಡರು ಬಹಿರ್ದೆಸೆಗೆ ಪ್ರವಾಸಿ ಮಂದಿರದಲ್ಲಿ ಅವಕಾಶ ನೀಡದಿದ್ದಾಗ ಖುದ್ದು ಜಿಲ್ಲಾಧಿಕಾರಿಗಳಿಗೆ ಕರೆಮಾಡಿ ತರಾಟೆಗೆ ತೆಗೆದು ಕೊಂಡಿದ್ದರು.
ನಾನು ಮಾಜಿ ಪ್ರಧಾನಿಯಾಗಿದ್ದು, ಸರ್ಕಾರದಿಂದ ಉನ್ನತ ಭದ್ರತೆ ಪಡೆದಿದ್ದೇನೆ. ಹಾದಿ ಬೀದಿಯಲ್ಲಿ, ಇನ್ಯಾವುದೋ ಖಾಸಗಿ ಹೋಟೆಲ್ನಲ್ಲಿ ಬಹಿರ್ದೆಸೆಗೆ ಹೋಗಲಾಗದು. ನೀವು ಅಡಚಣೆ ಮಾಡುವುದು ಸರಿಯಲ್ಲ. ನಾನು ಪಕ್ಷದ ಸಭೆಯನ್ನಾಗಲಿ, ರಾಜಕೀಯ ಚಟುವಟಿಕೆಯನ್ನಾಗಲಿ ಅಲ್ಲಿ ನಡೆಸುವುದಿಲ್ಲ ಎಂದಿದ್ದರು. ಈ ಬಾರಿ ದೇವೇಗೌಡರ ಪ್ರವಾಸಿ ಮಂದಿರ ಭೇಟಿಗೆ ಯಾವುದೇ ಅಡಚಣೆ ಇರಲಿಲ್ಲ. ಅಂತೆಯೇ ಅವರು ಪಕ್ಷದ ಮುಖಂಡರು ಹಾಗೂ ಬೆಂಬಲಿಗರ ಹಿಂಬಾಲಿಸದಂತೆ ತಾಕೀತು ಮಾಡಿ, ಒಬ್ಬರೇ ಹೋಗಿ ಬಹಿರ್ದೆಸೆ ಮುಗಿಸಿ ಹಿಂದಿರುಗಿದರು.