ನಾನು ಈ ಜಿಲ್ಲೆಯ ಮಗ, ಸತ್ತರೆ ಮಣ್ಣು ಮಾಡೋದು ಇದೇ ನೆಲದಲ್ಲೇ: ಡಿಕೆಶಿ
ಚನ್ನಪಟ್ಟಣ: ನಾನು ಈ ಜಿಲ್ಲೆಯ ಮಗ. ನಾನೇನಾದರೂ ಸತ್ತರೆ ಮಣ್ಣು ಮಾಡೋದು ಇದೇ ನೆಲದಲ್ಲೇ ಹೊರತು ಹೊಳೆನರಸೀಪುಕ್ಕೆ ಕೊಂಡೊಯ್ಯುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಟ್ಟುಕೊಂಡು ಟೀಕಾ ಪ್ರಹಾರ ನಡೆಸಿದರು.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 'ನನಗೆ ನನ್ನದೆಂದು ಹೇಳಿಕೊಳ್ಳಲು ಇರುವುದು ರಾಮನಗರ ಜಿಲ್ಲೆ ಒಂದೇ. ಬೇರೆಯವರಂತೆ ಹೋದ ಕಡೆಯಲ್ಲೆಲ್ಲಾ ಒಂದೊಂದು ಜಿಲ್ಲೆಯನ್ನು ಕಣ್ಣು, ಹೃದಯ ಎನ್ನುವುದಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಈ ಜಿಲ್ಲೆ ಜನ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ' ಎಂದು ಆಶ್ವಾಸನೆ ನೀಡಿದರು. ಈ ಭಾಗದ ಜನರಿಗೆ ಏನೇ ಸಮಸ್ಯೆ ಎದುರಾದರೂ ಪೊಲೀಸ್ ಠಾಣೆ, ಆಸ್ಪತ್ರೆಗೆ, ತಾಲೂಕು ಕಚೇರಿಗೆ ನಾನಾಗಲೀ ಅಥವಾ ನನ್ನ ಸಹೋದರ ಸುರೇಶ್ ಆಗಲೀ ಬರುತ್ತಾರೆ. ಜನರ ಸಮಸ್ಯೆಗೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸ್ಪಂದಿಸುವುದಿಲ್ಲ ಎನ್ನುವುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಭಿವೃದ್ಧಿಗೆ ಬೆಂಬಲಿಸಿ: ತಾಲೂಕಿನ ಅಭಿವೃದ್ಧಿಗಾಗಿ ಯೋಗೇಶ್ವರ್ ಬಿಜೆಪಿಗೆ ಹೋಗಿದ್ದರು. ಇದೀಗ ಸಮಾಜವಾದಿ ಪಕ್ಷದಲ್ಲಿದ್ದಾರೆ. ಪಕ್ಷಾಂತರ ಮಾಡಿದಾಗೆಲ್ಲಾ ತಾಲೂಕಿನ ಅಭಿವೃದ್ಧಿಗಾಗಿ ಎಂದು ಹೇಳಿಕೊಳ್ಳುತ್ತಾರೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವಿದ್ದು, ತಾಲೂಕಿನ ಅಭಿವೃದ್ಧಿಗಾಗಿ ಅವರೀಗ ನಮ್ಮ ಪಕ್ಷವನ್ನೇ ಬೆಂಬಲಿಸಲಿ ಎಂದು ಶಿವಕುಮಾರ್ ಸಲಹೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿದರು.