ಯುಪಿಎ ಸರ್ಕಾರ ವಿಫಲ: ಎಚ್‌ಡಿಕೆ ಟೀಕೆ
ಕ.ಪ್ರ.ವಾರ್ತೆ ಕನಕಪುರ ಆ.8
ಹಗರಣಗಳ ಸುಳಿಗೆ ಸಿಲುಕಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಸಮರ್ಥವಾಗಿ ಅಧಿವೇಶನ ನಡೆಸುವಲ್ಲಿ ವಿಫಲವಾಗಿದೆ. ಪ್ರತಿ ದಿನ ಸರಾಸರಿ 30 ನಿಮಿಷವಷ್ಟೇ ಅಧಿವೇಶನ ನಡೆಸುತ್ತಿರುವ ಅಪಕೀರ್ತಿ ಯುಪಿಎ ಸರ್ಕಾರಕ್ಕಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಕುಮಾರಸ್ವಾಮಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲವೆನ್ನುವ ಕಾಂಗ್ರೆಸ್ ಮುಖಂಡರ ಟೀಕೆಗೆ ಕನಕಪುರದ ಜೆಡಿಎಸ್ ಸಭೆಯಲ್ಲಿ ತಿರುಗೇಟು ನೀಡಿದ ಅವರು, ಅಧಿವೇಶನಕ್ಕಾಗಿ ಸರ್ಕಾರವು ಜನರ ಶ್ರಮದ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕಿತ್ತೊಗೆದಾಗಷ್ಟೇ ದೇಶಕ್ಕೆ ಉಳಿಗಾಲ ಎಂದರು.
ಅಧಿವೇಶನದಲ್ಲಿ ಪ್ರತಿಪಕ್ಷದವರಿಗೆ ಮಾತನಾಡಲು ಸಿಗೋದು ಕೇವಲ 2 ನಿಮಿಷವಷ್ಟೇ. ಕ್ಷೇತ್ರಗಳು, ಜನರ ಸಮಸ್ಯೆ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೇಕಿಲ್ಲ. ಸಂಸದನಾಗಿದ್ದಾಗ ನಾನು ವಿಮಾನಯಾನದ ಟಿಕೆಟ್, ದೆಹಲಿಯಲ್ಲಿ ನಿವಾಸವನ್ನು ತಿರಸ್ಕರಿಸಿದ್ದೇನೆ. ಇದು, ಜನರ ಹಣ ಪೋಲಾಗಬಾರದೆಂದು ತೆಗೆದುಕೊಂಡ ತೀರ್ಮಾನ ಎಂದು ತಿಳಿಸಿದರು.
ಗಣಿ ಅಕ್ರಮದ ಸುಳಿಯಿಂದ ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಸಹೋದರರು ಹೊರ ಬರಲು ಸಾಧ್ಯವಾಗದಂತಹ ಸ್ಥಿತಿ ಇದೆ. ಶಿವಕುಮಾರ್ ಸಚಿವರಾಗಿದ್ದಾಗ ಹೆಣದ ಹೆಬ್ಬೆಟ್ಟು ಹಾಕಿಸಿಕೊಂಡು, ಭೂ ಹಗರಣಮೊಂದನ್ನು ನಡೆಸಿದ್ದಾರೆ. ಇಂತಹವರು ಜನ ನಾಯಕರಾಗಲು ಅನರ್ಹರು ಎಂದು ಆರೋಪಿಸಿದರು.
ಸಿದ್ದು ನಡೆಸಿದ ಷಡ್ಯಂತ್ರ: ಶತಮಾನದ ಇತಿಹಾಸವಿದೆ ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯೇ ಸಿಗದೆ, 17 ಕ್ರಿಮಿನಲ್ ಕೇಸ್ ಇರುವ ಗಣಿ ಲೂಟಿಕೋರ ವ್ಯಕ್ತಿಯನ್ನು ಕಣಕ್ಕಿಳಿಸಿದೆ. ಈ ಚುನಾವಣೆ ಮೂಲಕ ಶಿವಕುಮಾರ್ ಮತ್ತು ಸಹೋದರನನ್ನು ರಾಜಕೀಯವಾಗಿ ನಿರ್ನಾಮ ಮಾಡುವುದು ಸಿದ್ದರಾಮಯ್ಯ ಷಡ್ಯಂತ್ರವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಶಿವಕುಮಾರ್ ಮೇಲೆ ಇರುವ ಕಳಂಕವೇನು ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಆಪ್ತ ಸಂಸದ
ಎಚ್.ವಿಶ್ವನಾಥ್ ಮಾಹಿತಿಯೇ ಸಾಕು ಎಂದು ತಿಳಿಸಿದರು. ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ, ಮಾಜಿ ಶಾಸಕ ಮರಿಲಿಂಗೇಗೌಡ, ಶಾಸಕ ಎಚ್.ಸಿ.ಬಾಲಕೃಷ್ಣ, ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್ ಮಾತನಾಡಿದರು. ಸಿದ್ದಪ್ಪಾಜಿ, ಸಿದ್ದಮರೀಗೌಡ, ನಾರಾಯಣಗೌಡ, ಬಿ.ನಾಗರಾಜು, ಪುಟ್ಟರಾಜು, ದೊಡ್ಡಕೊಪ್ಪ ರಾಜು ಭಾಗವಹಿಸಿದ್ದರು.
ನನ್ನದೂ ರಾಮನಗರದಲ್ಲೇ ಮಣ್ಣು
ಡಿ.ಕೆ.ಶಿವಕುಮಾರ್ ಅವರಂತೆಯೇ ರಾಮನಗರವೇ ನನ್ನ ಕರ್ಮಭೂಮಿ. ನಾನು ಸತ್ತರೂ ಇದೇ ಜಿಲ್ಲೆಯ ಬಿಡದಿ ನೆಲದಲ್ಲೇ ಮಣ್ಣು ಮಾಡಲಾಗುತ್ತದೆ. ಮಣ್ಣು ಮಾಡುವ ವಿಷಯ ಕೆದಕಿ ಜನರ ಭಾವನೆ ಕೆರಳಿಸುವ ಶಿವಕುಮಾರ್ ಕುತಂತ್ರ ಫಲಿಸುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕೂಡ ತಿರುಗೇಟು ನೀಡಿದ್ದಾರೆ.