ಖೋಟಾನೋಟು; ಮಾರುತ್ತಿದ್ದವನ ಬಂಧನ
ಕ.ಪ್ರ. ವಾರ್ತೆ, ಆನೇಕಲ್ಲು, ಆ.9
ಡಿಪ್ಲೊಮಾ ಪರೀಕ್ಷೆಯಲ್ಲಿ ನಕಲು ಹೊಡೆದು, ಡಿಬಾರಾಗಿದ್ದ ಯುವಕನೊಬ್ಬ ಖೋಟಾ ನೋಟು ಮುದ್ರಿಸಿ ಚಲಾವಣೆಗೆ ತರಲು ಯತ್ನಿಸುತ್ತಿದ್ದಾಗ ಪೊಲೀಸರ ಅತಿಥಿಯಾಗಿದ್ದಾನೆ.
ಆಂಧ್ರ ಮೂಲದ ಪ್ರಕಾಶಂ ಜಿಲ್ಲೆಯ ಗೊಲ್ಲಪುರಿ ನರೇಂದ್ರಬಾಬು (19) ಬಂಧಿತ ಆರೋಪಿ. ಈತನನ್ನು ಬಂಧಿಸಿದ ಪೊಲೀಸರು ಈತ ವಾಸವಿದ್ದ ಲಕ್ಷೀ ಗಣೇಶ ಸ್ಟೇ ಹೋಂ ಮೇಲೆ ದಾಳಿ ನಡೆಸಿ ಲ್ಯಾಪಾಟಾಪ್ ಹಾಗೂ ಪ್ರಿಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಈತನ ಬಳಿ ಇದ್ದ 100 ಮುಖಬೆಲೆಯ 30 ಹಾಗೂ 500 ಮುಖಬೆಲೆಯ 4 ನೋಟುಗಳನ್ನು ವಶಪಡಿಸಿಕೊಂಡಿದ್ದು ಈ ಜಾಲದ ಹಿಂದೆ ಯಾರಿದ್ದಾರೆ ಎಂಬುದನ್ನು ಇನ್ನೂ ಪತ್ತೆ ಹಚ್ಚಬೇಕಿದೆ.
ಕುಡಿಯಲು ಹೋಗಿ ಸಿಕ್ಕಿ ಬಿದ್ದ: ಗೋವಿಂದಶೆಟ್ಟಿ ಪಾಳ್ಯದ ಐಶ್ಯರ್ಯ ಬಾರ್ಗೆ ಕುಡಿಯಲು ಹೋದ ಬಾಬು ಬೀರ್ ಖರೀದಿಸಿ 100 ರ ನೋಟ್ ಒಂದನ್ನು ನೀಡಿದ. ಬಾರ್ ಮಾಲೀಕನಿಗೆ ಅನುಮಾನ ಬಂದು ಬೇರೆ ನೋಟು ನೀಡುವಂತೆ ಕೇಳಿದರು. ಆಗ ಇದಕ್ಕೇನಾಗಿದೆ ಎಂದು ರೋಪ್ ಹಾಕಿದ. ಕೂಡಲೇ ಬಾರ್ ಕ್ಯಾಷಿಯರ್ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದರು. ಜಾಗೃತರಾದ ಪೊಲೀಸರು ಕೂಡಲೇ ಬಾಬುವನ್ನು ಬಂಧಿಸಿದರು.