ಜೆಡಿಎಸ್ ಕುಟುಂಬ ಸೀಮಿತ ರಾಜಕೀಯ ಒಕ್ಕೂಟ
ಕ.ಪ್ರ.ವಾರ್ತೆ ರಾಮನಗರ ಆ.9
ಜೆಡಿಎಸ್ ಪಕ್ಷವು ಒಂದು ಕುಟುಂಬದ ಅನುಕೂಲಕ್ಕೆ ಸೀಮಿತವಾದ ರಾಜಕೀಯ ಒಕ್ಕೂಟವಾಗಿದೆ. ಈ ಪಕ್ಷದಿಂದ ರಾಜ್ಯದ ಜನರ ಹಿತ ಕಾಪಾಡಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಆರೋಪಿಸಿದ ರು.
ಜೆಡಿಎಸ್ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಸೀಮಿತವಾಗಿದೆ. ಇವರು ಕುಟುಂಬದ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.
ಜೆಡಿಎಸ್ ಮುಖಂಡರೇ ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸುತ್ತಿದ್ದರು. ಆದರೆ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ. ಆದ್ದರಿಂದ ಜಾತ್ಯತೀತ ಜನತಾದಳ ಎಂಬ ಪಕ್ಷದ ಹೆಸರನ್ನು ತಂದೆ ಮಕ್ಕಳ ಅನುಕೂಲ ಸಿಂಧು ಪಕ್ಷ ಎಂದು ಬದಲಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ದ್ವಂದ್ವ ನಿಲುವು: ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಬಿಜೆಪಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಮರುದಿನವೇ ಆ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ದ್ವಂದ್ವ ನಿಲುವು ಪ್ರದರ್ಶಿಸುತ್ತಾರೆ. ಜನರು ಈ ಇಬ್ಬರಲ್ಲಿ ಯಾರನ್ನು ನಂಬಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ಹಾಗೂ ಜೆಡಿಎಸ್ಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಯಾವಾಗ ಒಂದಾಗುತ್ತಾರೆ, ಯಾವಾಗ ಬೇರೆ ಆಗ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ಸಮಯ ಸಂದರ್ಭಕ್ಕೆ ತಕ್ಕ ಹಾಗೆ ವೇಷ ಹಾಗೂ ಬಣ್ಣವನ್ನು ಬದಲಿಸುತ್ತಾರೆ. ಜನ ಇವರನ್ನು ನಂಬಬಾರದು ಎಂದರು.
ಮತದಾರರಲ್ಲಿ ಒಲವಿಲ್ಲ: ನಗರ ಪ್ರದೇಶದಲ್ಲಿ ಜೆಡಿಎಸ್ ಪಕ್ಷಕ್ಕೆ ಮತದಾರರಲ್ಲಿ ಒಲವಿಲ್ಲ. ಬೆಂಗಳೂರು ಮಹಾನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯೇ ನೇರ ಎದುರಾಳಿ. ಆ ಪಕ್ಷದ ಅಭ್ಯರ್ಥಿ ಇಲ್ಲದಿದ್ದರೆ ಬಿಜೆಪಿ ಮತಗಳು ಜೆಡಿಎಸ್ಗೆ ವರ್ಗಾವಣೆಯಾಗಲಿವೆ ಎಂಬುದು ಕೇವಲ ಭ್ರಮೆ. ಇದರಿಂದ ಕಾಂಗ್ರೆಸ್ಗೆ ಪರೋಕ್ಷ ಲಾಭವಾಗಲಿದೆ ಎಂದು ತಿಳಿಸಿದರು.
ಅಪವಿತ್ರ ಮೈತ್ರಿ: ಬಿಜೆಪಿ ಹಾಗೂ ಜೆಡಿಎಸ್ಗಳು ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿವೆ. ರಾಜಕೀಯ ದುರುದ್ದೇಶದಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಆದರೆ ಮತದಾರರಿಗೆ ಅಂತಹ ದುರುದ್ದೇಶ ಇಲ್ಲ. ಕಾಂಗ್ರೆಸ್ ಮಣಿಸುವ ಆಸೆ ಫಲಿಸುವುದಿಲ್ಲ. ಡೋಂಗಿ ಜಾತ್ಯತೀತವಾದಿಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಾವಧಿಯಲ್ಲೇ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಬಡವರ, ದೀನ ದಲಿತರ, ಧಮನಿತರ ಬಗ್ಗೆ ಕಾಳಜಿ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳ ಸಾಧನೆಗಳೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಗಡಿ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರನ್ನು ಸಂಪರ್ಕಿಸಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ನಷ್ಟವನ್ನು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸುವ ಮೂಲಕ ಸರಿದೂಗಿಸಿಕೊಳ್ಳಬೇಕೆಂಬ ತವಕ ಕಾರ್ಯಕರ್ತರದ್ದಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈ ಕ್ಷೇತ್ರ ಸಂಸದ ಕೂಡ ಕಾಂಗ್ರೆಸ್ ನವರೇ ಆಗಿದ್ದರೆ ಅಭಿವೃದ್ಧಿ ಕಾರ್ಯಕ್ರಮಗಳು ಸಾಧ್ಯವಾಗಲಿವೆ ಎಂಬುದು ಜನರ ಭಾವನೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭಾರಿ ಬಹುಮತದೊಂದಿಗೆ ಗೆಲವು ಸಾಧಿಸಲಿದ್ದಾರೆ ಎಂದು ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಎ.ಮಂಜುನಾಥ್, ಕೆ.ರಮೇಶ್, ಮುಖಂಡರಾದ ಕಾಂತರಾಜ ಪಟೇಲ್, ಸಿ.ಎನ್.ವೆಂಕಟೇಶ್ ಇದ್ದರು.