ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಿಸಿ ಕಚೇರಿ ಸಭಾಂಗಣದಲ್ಲಿ ತರಬೇತಿ

Rashmi Kasaragodu
Updated On : 10 Aug 2013, 1:02 am

ರಾಮನಗರ: ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಾಹಿತಿ ಹಾಗೂ ನಿಗದಿಪಡಿಸಿರುವ ದರ, ಪಾಲಿಸಬೇಕಿರುವ ನಿಯಮಗಳ ಕುರಿತು ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚುನಾವಣಾ ವೆಚ್ಚ ವೀಕ್ಷಕ ಬೈರೇನ್ ಪಾರ್ಮರ್, ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ದಿನದಿಂದಲೇ ಪ್ರತಿದಿನವು ಚುನಾವಣೆಗೆ ಅಭ್ಯರ್ಥಿಯ ಪರವಾಗಿ ಮಾಡಲಾಗುವ ವೆಚ್ಚದ ವಿವರವನ್ನು ಸಲ್ಲಿಸಬೇಕಿದೆ. ಅಭ್ಯರ್ಥಿಯು ಚುನಾವಣಾ ಖರ್ಚು ವೆಚ್ಚವನ್ನು ಬ್ಯಾಂಕ್ ಖಾತೆ ತೆರೆದು ಪ್ರತಿ ವ್ಯವಹಾರವನ್ನು ಖಾತೆಯ ಮೂಲಕವೇ ನಿರ್ವಹಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಅಭ್ಯರ್ಥಿಗಳು ಚುನಾವಣಾ ಖರ್ಚು ವೆಚ್ಚದ ಸರಿಯಾದ ಮಾಹಿತಿಯ ವಿವರವನ್ನು ನಿರ್ವಹಿಸಬೇಕು. ಅದನ್ನು ಚುನಾವಣಾಧಿಕಾರಿ ಅಥವಾ ನಿಯೋಜಿಸಲ್ಪಟ್ಟ ಅಧಿಕಾರಿಗೆ ಒದಗಿಸಬೇಕು. ಯಾವುದೇ ಅಭ್ಯರ್ಥಿಯ ಖರ್ಚು ವೆಚ್ಚವು ನಿಗದಿತ ಮೊತ್ತಕ್ಕಿಂತ ಹೆಚ್ಚಿಗೆ ಆಗುತ್ತಿರುವುದು ಕಂಡುಬಂದಲ್ಲಿ ಅಥವಾ ಯಾವುದೇ ದೂರುಗಳಿದ್ದಲ್ಲಿ ಪ್ರತ್ಯೇಕವಾಗಿ ಅಭ್ಯರ್ಥಿಯ ಖರ್ಚು ವೆಚ್ಚವನ್ನು ಪರಿಶೀಲಿಸುವ ಅಧಿಕಾರ ಚುನಾವಣಾಧಿಕಾರಿಗಳಿಗೆ ಇರುವುದಾಗಿ ತಿಳಿಸಿದರು.
ಅಭ್ಯರ್ಥಿಯ ವೆಚ್ಚವನ್ನು ಯಾವುದೇ ವ್ಯಕ್ತಿಯು ನಿಗದಿತ ಶುಲ್ಕ ಪಾವತಿಸಿ ನಿಗದಿತ ಅವಧಿಯ ನಂತರ ಪಡೆಯಬಹುದು. ಅಭ್ಯರ್ಥಿಗಳಿಗೆ ಖರ್ಚು ವೆಚ್ಚದ ಬಗ್ಗೆ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿ ಪಡೆಯುವಂತೆ ತಿಳಿಸಿದರು.
ಕರಪತ್ರ, ಪೋಸ್ಟರ್, ಬ್ಯಾನರ್, ಫ್ಲೆಕ್ಸ್ ಇತ್ಯಾದಿಗಳನ್ನು ಮುದ್ರಿಸುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಮುದ್ರಕರ ಹೆಸರು ವಿಳಾಸಗಳನ್ನು ಹಾಗೂ ಮುದ್ರಿಸಿದ ಪ್ರತಿಗಳ ಸಂಖ್ಯೆಯನ್ನು ಪ್ರತಿಯೊಂದಿಗೆ ಒದಗಿಸಬೇಕು. ಕಾನೂನು ಉಲ್ಲಂಘಿಸಿ ಮುದ್ರಣ ಮಾಡುವ ಮುದ್ರಣಾಲಯದವರು ಶಿಕ್ಷೆಗೊಳಪಡಲಿದ್ದಾರೆ ಎಂದು ಅವರು ಎಚ್ಚರಿಸಿದರು.
ತರಬೇತಿ ನೀಡಿದ ಸಹಾಯಕ ಚುನಾವಣಾಧಿಕಾರಿ ಜಯಮಾಧವ್ ಮಾತನಾಡಿ, ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳ ವಿಡಿಯೋ ಚಿತ್ರೀಕರಣ ಮಾಡಿ ವೆಚ್ಚವನ್ನು ವೆಚ್ಚ ನಿರ್ವಹಣಾ ತಂಡ ನಿಗದಿಪಡಿಸಲಿದೆ. ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್‌ಡುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಮುಖಂಡರು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement