ಸಂಭ್ರಮದ ರಂಜಾನ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಆ.9
ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನೆಲ್ಲೆಡೆ ಮುಸಲ್ಮಾನ ಬಾಂಧವರು ಶುಕ್ರವಾರ ಸಂಭ್ರಮದ ರಂಜಾನ್ ಆಚರಿಸಿದರು.
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ ಮುಸ್ಲಿ ಸಮುದಾಯ ಸಮಾನತೆ, ಸೌಹಾರ್ದತೆ ಮತ್ತು ಆತ್ಮಾವಲೋಕನದ ಸಂದೇಶದ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದರು.
ಸಾಮೂಹಿಕ ಪ್ರಾರ್ಥನೆ: ಇಲ್ಲಿನ ಶಾಂತಿನಗರದಲ್ಲಿರುವ ಈದ್ಗಾದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮೌಲ್ವಿಗಳ ಧರ್ಮೋಪದೇಶದಂತೆ ಎಲ್ಲರೂ ಸಮಾನ ಚಿಂತನೆ ಮತ್ತು ಸಮಾನ ಬದುಕಿನ ಆಶಯದೊಂದಿಗೆ ಪ್ರಾರ್ಥನೆ ಮಾಡಿದ್ದು ವಿಶೇಷವಾಗಿತ್ತು.
ರಂಜಾನ್ ಬದುಕಿನ ಅವಲೋಕನದ ಹಬ್ಬ. ಬದುಕಿನಲ್ಲಿ ನಡೆದ ಲೋಪದೋಷಗಳನ್ನು ತಿದ್ದುವ, ಮುಂದಿನ ಜೀವನವನ್ನು ದೈವ ಸಂಪ್ರೀತಿಯಲ್ಲಿ ತೊಡಗಿಸಿಕೊಳ್ಳುವ ದಿನ. ಎಲ್ಲಿ ದೈವ ನಿಯಮಗಳ ಪಾಲನೆ ಇರುತ್ತದೆಯೋ ಅಲ್ಲಿ ಶಾಂತಿ, ಸಮೃದ್ಧಿಗಳು ನೆಲೆಸುತ್ತವೆ. ಹೀಗೆ 1 ತಿಂಗಳ ಪೂರ್ಣ ಶ್ರಾದ್ಧಾ ನಿಯಮಗಳಿಗೆ ಪೂರಕ ಜೀವನ ನಡೆಸಿ ಅದರಂತೆ ಮುಂದಿನ ದಿನಗಳನ್ನು ಕಳೆಯುವ ಪ್ರತಿಜ್ಞೆ ಕೈಗೊಳ್ಳಬಹುದಾದ ವಿಜಯದ ದಿನ. ದೇವ ಸಂಪ್ರೀತಿ ಗಳಿಸಲು ಅವಕಾಶ ಕಲ್ಪಿಸಿದ ಮತ್ತು ಬಡವರ, ನಿರ್ಗತಿಕರ, ಅಸಹಾಯಕರನ್ನೂ ಸಮಾನ ಅವಕಾಶಗಳಿಗೆ ಮುಕ್ತಗೊಳಿಸಿ ಅಲ್ಲಾನಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಎಂಬ ಸಂದೇಶ ಕೇಳಿ ಬಂತು.
ಎಲ್ಲೆಡೆ ಸಂಭ್ರಮ: ದೊಡ್ಡಬಳ್ಳಾಪುರ ನಗರದ ಶಾಂತಿನಗರದ ಹಳೇ ಈದ್ಗಾ, ಚಿಕ್ಕಪೇಟೆ, ಕುಂಬಾರಪೇಟೆ, ಕೋಟೆ ಮಸೀದಿ, ದರ್ಗಾಜೋಗಿಹಳ್ಳಿಗಳಲ್ಲಿ ಕೂಡ ಮುಸಲ್ಮಾನ ಬಾಂಧವರು ಪವಿತ್ರ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಗ್ರಾಮಾಂತರ ಪ್ರದೇಶದ ತೂಬಗೆರೆ, ದೊಡ್‌ಡಬೆಳವಂಗಲ, ಸಾಸಲು, ಆರೂಡಿ, ಕನಸವಾಡಿ, ಪಾಲನಜೋಗಿಹಳ್ಳಿ, ಬಾಶೆಟ್ಟಿಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತ್ತು ಹೋಬಳಿ ಕೇಂದ್ರಗಳಲ್ಲೂ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಸಾವಿರಾರು ಮುಸಲ್ಮಾನ ಬಂಧುಗಳು ಪರಸ್ಪರ ಈದ್ ಮುಬಾರಕ್ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಬಿಗಿ ಬಂದೋಬಸ್ತ್: ರಂಜಾನ್ ಹಬ್ಬದ ಅಂಗವಾಗಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಮಸೀದಿಗಳು ಮತ್ತು ಪ್ರಾರ್ಥನಾ ಸ್ಥಳಗಳ ಬಳಿ ವಿಶೇಷ ಪಡೆಗಳನ್ನು ನಿಯೋಜಿಸಲಾಗಿತ್ತು. ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು. ಶಾಂತಿಯುತ ಆಚರಣೆಗೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು.