ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಖಲೀಲುಲ್ಲಾಖಾನ್ ಆಯ್ಕೆ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಆ.9
ದೊಡ್ಡಬಳ್ಳಾಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ದೊಡ್ಡಬಳ್ಳಾಪುರ ತಾಲೂಕು ಕಸಾಪ ಸಂಸ್ಥಾಪಕರಲ್ಲೊಬ್ಬರಾದ ಎಂ.ಇ. ಖಲೀಲುಲ್ಲಾಖಾನ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ಇಲ್ಲಿನ ಪುರಭವನದ ಕಸಾಪ ಕಚೇರಿಯಲ್ಲಿ ನಡೆದ ಕಸಾಪ ಕಾರ್ಯಕಾರಿ ಸಮಿತಿ ಮತ್ತು ಸಮ್ಮೇಳನ ವಿವಿಧ ಸಮಿತಿಗಳ ಸಭೆಯಲ್ಲಿ ನಡೆದ ಚರ್ಚೆಯ ನಂತರ ಖಲೀಲುಲ್ಲಾಖಾನ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಕನ್ನಡದ ದನಿ ಖಲೀಲ್: ಖಲೀಲುಲ್ಲಾಖಾನ್ ಅವರು ಕನ್ನಡದ ನೈಜ ಧ್ವನಿಯಾಗಿ ಕನ್ನಡವನ್ನು ಅತ್ಯಂತ ಪ್ರಾಥಮಿಕ ಹಂತದಿಂದ ಕಟ್ಟುವ ಪ್ರಯತ್ನ ಮಾಡಿದವರು. ಮಗ್ಗದ ಕೂಲಿ ಕಾರ್ಮಿಕರಾಗಿ ವೃತ್ತಿ ಆರಂಭಿಸಿ, ಸಂಘರ್ಷಯುತ ಬದುಕು ಸಾಗಿಸಿದ ಅವರು ಕಾಯಕದ ಜೊತೆಗೆ ಪದವಿ ಅಭ್ಯಸಿಸಿ ಶಿಕ್ಷಕರಾಗಿ ರೂಪಗೊಂಡವರು. ಶಿಕ್ಷಣ ವೃತ್ತಿಯಲ್ಲಿ ತನ್ನದೇ ಆದ ಸಂವೇದನೆಗಳನ್ನು ಮಕ್ಕಳಲ್ಲಿ ಕಟ್ಟಿಕೊಡುವ ಮೂಲಕ ಕನ್ನಡತನವನ್ನು ಬಿತ್ತಿದವರು. ದೊಡ್ಡಬಳ್ಳಾಪುರದಲ್ಲಿ 60ರ ದಶಕದ ಕೊನೆಯ ಭಾಗದಲ್ಲಿ ಕಸಾಪವನ್ನು ಸ್ಥಾಪಿಸಲು ಪರಿಶ್ರಮ ವಹಿಸಿದರು. ಅಲ್ಲದೆ ಕನ್ನಡ ಮಿತ್ರ ಬಳಗ, ಶಕ್ತಿ ಕೇಂದ್ರ ಸೇರಿದಂತೆ ಕನ್ನಡ ಚಳವಳಿ ಮತ್ತು ಹೋರಾಟಗಳ ಪ್ರೇರಣೆಯಾಗಿಯೂ ಅವರು ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಸಾಹಿತಿಯಾಗಿ ಅನೇಕ ಕೃತಿಗಳನ್ನು ಬರೆದಿರುವ ಖಲೀಲುಲ್ಲಾಖಾನ್ ಅವರು ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಎಲ್ಲರೂ ಒಟ್ಟುಗೂಡಿ: ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಂ.ಇ. ಖಲೀಲುಲ್ಲಾಖಾನ್, ಕನ್ನಡ ಸಾಹಿತ್ಯ ಪರಿಷತ್ತು ಮಡಿವಂತಿಕೆ ಬಿಟ್ಟು ಹೊರಬರುತ್ತಿರುವುದು ಉತ್ತಮ ಬೆಳವಣಿಗೆ. ಅನೇಕ ಸಂಘಟನೆಗಳು ಕಸಾಪ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕು. ಎಲ್ಲ ಕನ್ನಡ ಮನಸ್ಸುಗಳು ಒಂದಾಗಬೇಕು. ಆಗ ಮಾತ್ರ ನೈಜ ಕನ್ನಡತನದ ಕಾಳಜಿ ಉಳಿಯಲು ಸಾಧ್ಯ ಎಂದರು.
ಅಭಿನಂದನೆ: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಇ.ಖಲೀಲುಲ್ಲಾಖಾನ್ ಅವರನ್ನು ಸಮ್ಮೇಳನ ಸ್ವಾಗತ ಸಮಿತಿ ಮತ್ತು ಕಸಾಪ ಕಾರ್ಯಕಾರಿ ಸಮಿತಿ ವತಿಯಿಂದ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ತಾಲೂಕು ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್, ಜಿಲ್ಲಾ ಕೋಶಾಧ್ಯಕ್ಷ ನ.ಮಹದೇವ್, ತಾ.ಕಾರ್ಯದರ್ಶಿ ಎಚ್.ಎನ್.ಪ್ರಕಾಶ್, ಕೆ.ಎಚ್.ಪ್ರವೀಣ್, ಕೋಶಾಧ್ಯಕ್ಷ ಎಂ.ಚಿಕ್ಕಣ್ಣ, ಕನ್ನಡಪರ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವನಾಯಕ್, ಬಿ.ಎಸ್.ಚಂದ್ರಶೇಖರ್, ರಾಜಘಟ್ಟ ರವಿ, ಅಗ್ನಿ ವೆಂಕಟೇಶ್, ನೆಲ್ಲುಗುದಿಗೆ ಚಂದ್ರು, ಪತ್ರಕರ್ತ ರಾಜೇಂದ್ರಕುಮಾರ್, ಪಿ.ಜಿ.ಸುಬ್ಬರಾವ್, ಜನಪರ ಮಂಜು, ಡಿ.ಸಿ.ಚೌಡರಾಜು, ಸಂಸ್ಕೃತಿ ಟ್ರಸ್ಟ್‌ನ ಎಚ್.ಎಸ್.ನಾಗೇಶ್, ಕಸಾಪ ಪದಾಧಿಕಾರಿಗಳಾದ ರಾಜುಸಣ್ಣಕ್ಕಿ, ಹನುಮಂತರಾಯಪ್ಪ, ನೇತ್ರಾವತಿ, ಪ್ರಕಾಶ್‌ರಾವ್, ವೆಂಕಟೇಶ್, ಎಸ್.ನಟರಾಜ್, ಜಿ.ಸಿ.ಶಿವಕುಮಾರ್ ಮತ್ತಿತರರು ಪಾಲ್ಗೊಂಡು ಅಭಿನಂದಿಸಿದರು. ವಿವಿಧ ಸಂಘಟನೆಗಳು ಸಮ್ಮೇಳನಾಧ್ಯಕ್ಷರನ್ನು ಅಭಿನಂದಿಸಿವೆ.