ರಾ-ಚ ರಾಡಿಯಲ್ಲಿ ಗುತ್ತಿಗೆದಾರನಿಗೆ 1.50 ಕೋಟಿ ಪಾಲು
ಕ.ಪ್ರ.ವಾರ್ತೆ ರಾಮನಗರ ಆ. 10
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಂಚಕರು ಲೂಟಿ ಮಾಡಿರುವ 16.50 ಕೋಟಿ ಪೈಕಿ ರಾಮನಗರದ ಗುತ್ತಿಗೆದಾರರೊಬ್ಬರಿಗೆ 1.50 ಕೋಟಿ ತಲುಪಿರುವ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ಪ್ರಾಧಿಕಾರಕ್ಕೆ ವಂಚಿಸಿದ ಹಣದಲ್ಲಿ ರಾಮನಗರದ ಗುತ್ತಿಗೆದಾರ ಸಯ್ಯದ್ ಮಹಮೂದ್ ಎಂಬುವರಿಗೆ 1.50 ಕೋಟಿ ನೀಡಿರುವ ಮಾಹಿತಿಯನ್ನು ಪೊಲೀಸ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿಗಳಾದ ಕೆಬ್ಬಳ್ಳಿ ಆನಂದ್ ಮತ್ತು ನಾಗಲಿಂಗಸ್ವಾಮಿ ಹೊರ ಹಾಕಿದ್ದಾರೆ.
ವಂಚಕರ ಜಾಲದ ರೂವಾರಿಗಳಾದ ಕೆಬ್ಬಳ್ಳಿ ಆನಂದ್ ಮತ್ತು ನಾಗಲಿಂಗಸ್ವಾಮಿಯನ್ನು ರಾಮನಗರ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆಯೇ ಸಯ್ಯದ್ ಮಹಮೂದ್ ನಾಪತ್ತೆಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ ಎಂದು ಡಿವೈಎಸ್ಪಿ ರಾಮಲಿಂಗಪ್ಪ ತಿಳಿಸಿದ್ದಾರೆ.
ಮಾತೆತ್ತಿದರೆ ಮಲೇಷ್ಯಾ: ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಂಚನೆಯಾದ ಬಹುಕೋಟಿ ಹೋಗಿದ್ದೆಲ್ಲಿಗೆ ಎನ್ನುವ ಪೊಲೀಸರ ಪ್ರಶ್ನೆಗೆ ಆರೋಪಿಗಳಾದ ಕೆಬ್ಬಳ್ಳಿ ಆನಂದ್ ಮತ್ತು ನಾಗಲಿಂಗಸ್ವಾಮಿ ಮಲೇಷ್ಯಾದಲ್ಲಿ ಎನ್ನುವ ಸಿದ್ಧ ಉತ್ತರವನ್ನಷ್ಟೇ ನೀಡುತ್ತಿದ್ದಾರೆ ಎನ್ನಲಾಗಿದೆ.
ಐದು ದಿನಗಳ ಸುದೀರ್ಘ ವಿಚಾರಣೆಯಲ್ಲಿ ಆರೋಪಿಗಳು ಹೂಡಿಕೆ ವಿವರದ ವಿಷಯದಲ್ಲಿ ಮಾತೆತ್ತಿದರೆ ಮಲೇಷ್ಯಾ ಹೆಸರನ್ನೇ ಹೇಳಿಕೊಂಡು ಬಂದಿದ್ದಾರೆ. ಸಯ್ಯದ್ ಮಹಮೂದ್ ಹೆಸರಿನ ವಿನಃ ಸ್ಥಳೀಯವಾಗಿ ಬೇರೆ ಹೆಸರು ಹೊರ ಹಾಕಿಲ್ಲ ಎಂದು ಹೇಳಲಾಗಿದೆ.