ಉಪಚುನಾವಣೆಗೆ ಜೆಡಿಎಸ್ ಅಪವಿತ್ರ ಮೈತ್ರಿ: ಸಚಿವ ದಿನೇಶ್ ಗುಂಡೂರಾವ್
ಆನೇಕಲ್: ಬೆಂ.ಗ್ರಾಮಾಂತರ ಉಪ ಚುನಾವಣೆಗೆ ನೇರ ಕಾರಣಕರ್ತರು ಎಚ್. ಡಿ. ಕುಮಾರ ಸ್ವಾಮಿ. ರಾಷ್ಟ್ರ ರಾಜಕಾರಣದಲ್ಲಿ ಏನೂ ಸಾಧಿಸಲಾಗದ ಕಾರಣ ಮತದಾರರ ದಿಕ್ಕು ತಪ್ಪಿಸಲು ವಿಧಾನ ಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಚುನಾವಣೆ ಬಂದರೆ ಯಾರದಾದರೂ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಲು ಸಿದ್ಧರಾಗುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಅವರು ಬೆಂಗಳೂರು ದಕ್ಷಿಣ ಬನ್ನೇರುಘಟ್ಟದಲ್ಲಿ ಉಪಚುನಾವಣೆಯಲ್ಲಿ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿ ಜೆಡಿಎಸ್ ರಾಜಕಾರಣ ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ಹಾಗೂ ಅನಿತಾರವರ ಸುತ್ತಲೂ ಸುತ್ತುತ್ತದೆ. ಜನಸೇವೆ ಎಂದರೆ ಕುಟುಂಬ ಸದಸ್ಯರ ಸೇವೆ ಎಂಬುದು ಅವರ ಧ್ಯೇಯವಾಗಿದೆ ಎಂದರು. ಉತ್ಸಾಹಿ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ಮತ ನೀಡಬೇಕೆಂದು ಕೋರಿದರು.
ಸಿದ್ದರಾಮಯ್ಯರವರ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಮೂಲಕ 1 ಕೋಟಿ ಕುಟುಂಬಗಳಿಗೆ ರು. 1 ಬೆಲೆಗೆ 30 ಕೆಜಿ ಅಕ್ಕಿ ನೀಡಿದರು. ರೈತರಿಗೆ ರೂ. 2 ಲಕ್ಷ ಬಡ್ಡಿ ರಹಿತ ಸಾಲ ಘೋಷಿಸಿದ್ದಾರೆ. ಹೈನು ರೈತರಿಗೆ ಲೀಟರ್ ಒಂದಕ್ಕೆ ರು. 4 ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕ್ಷೀರ ಭಾಗ್ಯ ಯೋಜನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಡ ಜನತೆಗೆ ಸೂರು ಅಥವಾ ನಿವೇಶನ ನೀಡುವಲ್ಲಿ ಅದ್ಯತೆ ನೀಡಲಾಗುತ್ತದೆ ಎಂದರು. ಅಭ್ಯರ್ಥಿ ಸುರೇಶ್ ಮಾತನಾಡಿ ಯುಪಿಎ ಸರ್ಕಾರ ಆಹಾರ ಭದ್ರತೆ, ಆರೋಗ್ಯ ಭದ್ರತೆ ಹಾಗೂ ಎಲ್ಲರಿಗೂ ಕಡ್ಡಾಯ ಶಿಕ್ಷಣ ಘೋಷಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಶಾಶ್ವತ ಕುಡಿ ನೀರು ಯೋಜನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸ್ಥಳೀಯ ಮುಖಂಡ ಪುನೀತ್ ನೇತೃತ್ವದಲ್ಲಿ ಸಹಸ್ರಾರ ಯುವಕರು ಬೈಕ್ ರ್ಯಾಲಿ ನಡೆಸುವ ಮೂಲಕ ಕ್ಷೇತ್ರದ ನೂರಾರು ಹಳ್ಳಿ ಗಳಲ್ಲಿ ಮತ ಯಾಜನೆ ಮಾಡಿದರು. ಮುಖಂಡರಾದ ಎಚ್. ಎಸ್. ಬಸವರಾಜು, ಜಿಪಂ ಸದಸ್ಯ ಕೆ.ಸಿ. ರಾಮಚಂದ್ರ, ಬಮೂಲ್ ನಿರ್ದೇಶಕ ಆರ್. ಕೆ. ರಮೇಶ್, ಎಚ್. ಪಿ. ರಾಜಗೋಪಾಲರೆಡ್ಡಿ ರೋಡ್ ಶೋ ದಲ್ಲಿ ಭಾಗವಹಿಸಿದ್ದರು.