ಜಗತ್ತಿಗೆ ತ್ಯಾಗ ಸಾರುವ ವಿವೇಕವಾಣಿ
ದೊಡ್ಡಬಳ್ಳಾಪುರ: ಜಗತ್ತಿನಲ್ಲಿ ಭಾರತ ಜ್ಞಾನ ಪ್ರಸಾರದಲ್ಲಿ ತನ್ನ ಪಾರಂಪರಿಕ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಸ್ವಾಮಿ ವಿವೇಕಾನಂದ, ಗೌತಮಬುದ್ಧ, ಮಹಾತ್ಮಗಾಂಧಿಯವರಂತಹ ದಾರ್ಶನಿಕರ ಚಿಂತನೆಗಳೇ ಇದಕ್ಕೆ ಕಾರಣ ಎಂದು ನಿವೃತ್ತ ಅಧ್ಯಾಪಕ ಬಿ.ಎಲ್.ರಾಮಕೃಷ್ಣ ಹೇಳಿದರು.
ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತತ್ವಜ್ಞಾನ, ದೇಶಭಕ್ತಿ, ವೈಜ್ಞಾನಿಕ ಆವಿಷ್ಕಾರಗಳು, ನಡವಳಿಕೆ, ಅಹಿಂಸಾವಾದದ ಪ್ರತಿಪಾದನೆ ಸೇರಿದಂತೆ ಭೂತ ಮತ್ತು ವರ್ತಮಾನದ ತಾಳಮೇಳಗಳ ಜತೆಗೆ ಭವಿಷ್ಯದ ಚಿಂತನೆಗೆ ಭದ್ರಬುನಾದಿಯನ್ನು ಹಾಕಿಕೊಟ್ಟ ದೇಶ ಭಾರತ. ಆದರೆ ಇಂದು ಸಾಮಾಜಿಕ ಪ್ರಜ್ಞಾ ಶೂನ್ಯತೆ, ಭಯವಿಲ್ಲದ ಬದುಕು, ಕಾಂಚಾಣದ ವ್ಯಾಮೋಹದ ಭರಾಟೆಯಲ್ಲಿ ವಾಸ್ತವದ ನೈಜ ಚಿಂತನೆಗಳನ್ನು ಮರೆಯುತ್ತಿರುವುದು ಆತಂಕದ ವಿಚಾರ. ಇಂದಿನ ವೈಜ್ಞಾನಿಕ ಯುಗದಲ್ಲೂ ಮೌಢ್ಯ ನಮ್ಮನ್ನು ಬಿಡದಿರುವುದು ದೊಡ್ಡ ದುರಂತ ಎಂದರು.
ಕಾವೀಧಾರಿಗಳು ವಿವೇಕಾನಂದರು ಕೊಟ್ಟ ಕಾವಿ ದಾರ್ಶನಿಕ ಮೌಲ್ಯಗಳನ್ನು ಹೊಂದಬೇಕಿತ್ತು. ಆದರೆ ಇಂದು ಆ ಮೌಲ್ಯಗಳು ಅಪಮೌಲ್ಯೀಕರಣವಾಗಿವೆ. ತ್ಯಾಗ ಜಗತ್ತಿನ ಆದರ್ಶವಾಗಬೇಕಾದರೆ ವಿವೇಕವಾಣಿಯನ್ನು ಜಗತ್ತಿಗೆ ಸಾರಬೇಕು. ಪ್ರಶ್ನೆಗಳ ಮೂಲಕ ಬದುಕು ಕಟ್ಟಿಕೊಂಡ ವಿವೇಕಾನಂದರು ಪ್ರಶ್ನಾತೀತ ವ್ಯಕ್ತಿತ್ವವಾಗಿ ಬೆಳೆದದ್ದು ಇತಿಹಾಸ ಎಂದರು.
ಪರಿಸರವಾದಿ ಕೆ.ಗುರುದೇವ್ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಚಿತ್ರಾವತಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಳ್ಳಿ ಜನಪದ ಸಾಂಸ್ಕೃತಿಕ ತಂಡದ ಹಾಡೋನಹಳ್ಳಿ ನಾಗರಾಜ್, ಸಂತೋಷ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಚಂದ್ರಪ್ಪ, ಸಹಾಯಕ ಅಧಿಕಾರಿ ಡಾ.ಬಿ.ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.